ADVERTISEMENT

ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಭೇಟಿ ಮುಂದೂಡಲು ಮನವಿ

ದೇಗುಲ ಭೇಟಿ ಮುಂದೂಡಲು ಜನರಿಗೆ ಟಿಟಿಡಿ ಅಧಿಕಾರಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 29 ಮೇ 2022, 13:28 IST
Last Updated 29 ಮೇ 2022, 13:28 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ಹೈದರಾಬಾದ್: ಸುಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಭಕ್ತರ ದಟ್ಟಣೆಯಿಂದಾಗಿ ದರ್ಶನಕ್ಕಾಗಿ 48ಕ್ಕೂ ಅಧಿಕ ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶನಿವಾರ 89,318 ಭಕ್ತರಿಗಷ್ಟೇ ದರ್ಶನ ಭಾಗ್ಯ ದೊರೆತಿದ್ದು, ಬೆಟ್ಟದಲ್ಲಿ 30 ಸಾವಿರಕ್ಕೂ ಹೆಚ್ಚು ಭಕ್ತರು ತಮ್ಮ ಸರದಿಗೆ ಕಾಯುತ್ತಿದ್ದರು. ಈ ಕಾರಣದಿಂದ ಭಕ್ತರು ದೇಗುಲಕ್ಕೆ ಭೇಟಿ ನೀಡುವ ದಿನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ದೇವಸ್ಥಾನದ ಅಧಿಕಾರಿಗಳು ಕೋರಿದ್ದಾರೆ.

ಭಕ್ತರ ಅನಿರೀಕ್ಷಿತ ದಟ್ಟಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರದವರೆಗೆ ‘ವಿಐಪಿ ಬ್ರೇಕ್‌’ ದರ್ಶನ ಸೌಲಭ್ಯವನ್ನೂ ರದ್ದುಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದೇವಾಲಯದ ಒಳಾವರಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ.

ADVERTISEMENT

‘ಗಂಟೆಗೆ 4,500 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಿದೆ. ಆದರೆ, ಪ್ರತಿ ಗಂಟೆಗೆ ಸರದಿಗೆ ಸುಮಾರು 8,000 ಭಕ್ತರು ಸೇರ್ಪಡೆ ಆಗುತ್ತಿದ್ದಾರೆ.ಇನ್ನೂ ಕೆಲವು ದಿನ ಹೀಗೇ ಭಕ್ತರದಟ್ಟಣೆ ಇರುವ ಸಂಭವವಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶನಿವಾರ ದೇಗುಲದ ಹುಂಡಿಯಲ್ಲಿ ₹ 3.76 ಕೋಟಿ ಸಂಗ್ರಹವಾಗಿತ್ತು. ಅದಕ್ಕೂ ಹಿಂದೆ ಗುರುವಾರ ಹುಂಡಿಯಲ್ಲಿನ ಸಂಗ್ರಹ ಮೊತ್ತ ₹ 5.43 ಕೋಟಿ ಆಗಿತ್ತು’ ಎಂದು ವಿವರಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಕಾರಣ ಎರಡು ವರ್ಷ ದೇಗುಲಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧವಿತ್ತು. ಪರಿಣಾಮ, ಈಗ ನಿರ್ಬಂಧ ಸಡಿಲಿಕೆಯ ಹಂತದ ನಂತರ ಈಗ ಬೇಸಿಗೆ ರಜೆ ಅವಧಿ ಹಾಗೂ ವಾರಾಂತ್ಯದಲ್ಲಿ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ದೇವಸ್ಥಾನಕ್ಕೆ ಈಗ ಭಕ್ತರ ಸಾಗರವೇ ಹರಿದುಬರುತ್ತಿದೆ. ಸಾಮಾನ್ಯವಾಗಿ ವೈಕುಂಠ ಏಕಾದಶಿ, ಗರುಡ ಸೇವಾ ಅಂತಹ ದಿನಗಳಿಗಿಂತಲೂ ಹೆಚ್ಚಿನ ದಟ್ಟಣೆ ಇದೆ. ಇದೇ ಕಾರಣದಿಂದ ‘ಶ್ರೀವಾರಿ ದರ್ಶನ’ 48 ಗಂಟೆಯಷ್ಟು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನಕ್ಕಾಗಿ ಇರುವ ಎಲ್ಲ ಸರದಿ ಸಾಲುಗಳ ಭರ್ತಿಯಾಗಿದ್ದು, ಕಾಯ್ದು ನಿಲ್ಲುವ 30 ವಿಭಾಗಗಳು ಭರ್ತಿಯಾಗಿವೆ. ಇವುಗಳ ಹೊರತೆ 2 ಕಿ.ಮೀನಷ್ಟು ಭಕ್ತರ ಸಾಲು ಇದೆ. ಬೆಟ್ಟದ ಪ್ರವೇಶ ಮಾರ್ಗ ಅಲಿಪಿರಿ ಟೋಲ್‌ಗೇಟ್ ಬಳಿಯೂ ವಾಹನಗಳ ಉದ್ದನೆಯ ಸಾಲಿದೆ.

ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನಪ್ರಸಾದಕ್ಕೆ ಸೌಲಭ್ಯಕಲ್ಪಿಸಲು ಹೆಚ್ಚಿನ ಸಿದ್ಧತೆ ಆಗಿದೆ ಎಂದು ಅಧಿಕಾರಿಗಳು ಹೇಳಿದರು. ಆದರೆ, ಕೆಲ ಭಕ್ತರು ನಮಗೆ ಅನ್ನ ಪ್ರಸಾದ ವಿಳಂಬವಾಗಿ ದೊರೆಯಿತು, ಇತರೆ ಸೌಲಭ್ಯ ಸಿಗಲಿಲ್ಲ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.