ADVERTISEMENT

ಕೇಜ್ರಿವಾಲ್ ಜಾಮೀನಿಗೆ ತಡೆ, ಹೈಕೋರ್ಟ್‌ನಿಂದ ರೂಢಿಗತವಲ್ಲದ ಆದೇಶ: ಸುಪ್ರಿಂಕೋರ್ಟ್

ಪಿಟಿಐ
Published 24 ಜೂನ್ 2024, 14:03 IST
Last Updated 24 ಜೂನ್ 2024, 14:03 IST
<div class="paragraphs"><p>ಸುಪ್ರಿಂಕೋರ್ಟ್ ಹಾಗೂ&nbsp;ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌</p></div>

ಸುಪ್ರಿಂಕೋರ್ಟ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನು ಆದೇಶಕ್ಕೆ ಹೈಕೋರ್ಟ್‌ ತಡೆ ವಿಧಿಸಿರುವುದು 'ರೂಢಿಗತವಲ್ಲ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ದೆಹಲಿಯಲ್ಲಿ ಸದ್ಯ ಹಿಂಪಡೆಯಲಾಗಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್‌ ಅವರಿಗೆ ದೆಹಲಿ ನ್ಯಾಯಾಲಯ ಜೂನ್‌ 20ರಂದು (ಗುರುವಾರ) ಜಾಮೀನು ನೀಡಿತ್ತು. ಅದರಂತೆ ಕೇಜ್ರಿವಾಲ್ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಬೇಕಿತ್ತು. ಆದರೆ, ಬಿಡುಗಡೆ ಪ್ರಶ್ನಿಸಿ, ಜಾರಿ ಇ.ಡಿ, ಹೈಕೋರ್ಟ್‌ ಮೆಟ್ಟಿಲೇರಿತ್ತು.

ADVERTISEMENT

ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ರಜಾಕಾಲದ ಪೀಠವು, ಕೇಜ್ರಿವಾಲ್ ಅವರ ಬಿಡುಗಡೆಗೆ ತಡೆ ಹೇರಿತ್ತು. ಈ ಕುರಿತು ಎರಡೂ ಪಕ್ಷಗಳು ಜೂನ್ 24ರ ಒಳಗಾಗಿ ಅಭಿಪ್ರಾಯ ತಿಳಿಸಬೇಕು. ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯದ ಆದೇಶದ ಮೇಲೆ ತಡೆ ಮುಂದುವರಿಯಲಿದೆ ಎಂದೂ ಹೇಳಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಜೂನ್‌ 26ಕ್ಕೆ ನಿಗದಿಪಡಿಸಿರುವ ನ್ಯಾ.ಮನೋಜ್‌ ಮಿಶ್ರಾ ಹಾಗೂ ನ್ಯಾ. ಎಸ್‌ವಿಎನ್‌ ಭಟ್ಟಿ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ, 'ಸಾಮಾನ್ಯವಾಗಿ, ತಡೆ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಆದೇಶಗಳನ್ನು ಕಾಯ್ದಿರಿಸುವುದಿಲ್ಲ. ವಿಚಾರಣೆ ನಡೆಸಿದ ದಿನವೇ ಆದೇಶ ನೀಡಲಾಗುತ್ತದೆ. ಆದರೆ, ಈ ಪ್ರಕರಣದ ವಿಚಾರಣೆ ವೇಳೆ ತಡೆ ಆದೇಶ ನೀಡಲಾಗಿದೆ. ರೂಢಿಗತವಲ್ಲದ ಮಾರ್ಗ ಅನುಸರಿಸಲಾಗಿದೆ' ಎಂದು ಹೇಳಿದೆ.

ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅರ್ಜಿಯ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನ, ಹೈಕೋರ್ಟ್‌ ತೀರ್ಪನ್ನು ಎದುರು ನೋಡುತ್ತಿರುವುದಾಗಿಯೂ ಪೀಠ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.