ನವದೆಹಲಿ: ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಸಂಚಿನ ಕುರಿತ ‘ವಾಷಿಂಗ್ಟನ್ ಪೋಸ್ಟ್’ ತನಿಖಾ ವರದಿ ಆಧಾರರಹಿತವಾಗಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ(ಎಂಇಎ) ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ‘ಸಂಘಟಿತ ಅಪರಾಧಗಳು, ಭಯೋತ್ಪಾದನೆಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ ಹಂಚಿಕೊಂಡಿರುವ ವಿಷಯಗಳ ಕುರಿತು ಭಾರತ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಯತ್ತಿದೆ’ ಎಂದಿದೆ.
ಗಂಭೀರ ವಿಷಯದ ಕುರಿತು ಊಹಾತ್ಮಕ ಮತ್ತು ಬೇಜವಬ್ದಾರಿ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿದೆ.
‘ವಾಷಿಂಗ್ಟನ್ ಪೋಸ್ಟ್’ ವರದಿ ಕುರಿತಂತೆ ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್, ನಮ್ಮ ಕಳವಳವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
‘ವಾಷಿಂಗ್ಟನ್ ಪೋಸ್ಟ್’ ವರದಿ ಹೇಳುವುದೇನು?
ಅಮೆರಿಕದಲ್ಲಿ ನಡೆದಿದ್ದ, ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಯ ಸಂಚಿನಲ್ಲಿ ‘ರಾ’ ಅಧಿಕಾರಿ ವಿಕ್ರಮ್ ಯಾದವ್ ಅವರು ಭಾಗಿಯಾಗಿದ್ದರು. ಯಾದವ್ ಅವರು ಸಂಚಿನ ಭಾಗವಾಗಲು ಆಗ ಭಾರತೀಯ ಗುಪ್ತದಳ ಸಂಸ್ಥೆ ‘ರಾ’ ಮುಖ್ಯಸ್ಥರಾಗಿದ್ದ ಸಾಮಂತ್ ಗೋಯಲ್ ಅವರ ಅನುಮೋದನೆ ಸಿಕ್ಕಿತ್ತು. ಭಾರತದ ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರಿಗೂ ಸಿಖ್ ಕಾರ್ಯಕರ್ತನ ಕೊಲ್ಲುವ ‘ರಾ’ ಸಂಚಿನ ಅರಿವಿತ್ತು ಎಂದು ವರದಿ ಹೇಳಿದೆ.
ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಅದೇ ಅವಧಿಯಲ್ಲಿ ಪನ್ನೂ ಹತ್ಯೆಗೂ ಸಂಚು ನಡೆದಿದ್ದು, ಆ ಕಾರ್ಯಾ ಚರಣೆಗೂ ವಿಕ್ರಂ ಯಾದವ್ ಅವರಿಗೂ ಸಂಪರ್ಕವಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.