ADVERTISEMENT

ಉತ್ತರಪ್ರದೇಶದಲ್ಲಿ ನೆಹರೂ, ಸಾವರ್ಕರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:43 IST
Last Updated 23 ಜೂನ್ 2023, 13:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರೌಢಶಿಕ್ಷಣ ಮಂಡಳಿಯು 9ರಿಂದ 12ನೇ ತರಗತಿಯ ಪಠ್ಯದಲ್ಲಿ ಹಿಂದುತ್ವ ಸಿದ್ಧಾಂತದ ಪ್ರತಿಪಾದಕ ವಿ.ಡಿ. ಸಾವರ್ಕರ್, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಸೇರಿದಂತೆ 11 ನಾಯಕರ ಜೀವನ ಚರಿತ್ರೆಯನ್ನು ಸೇರ್ಪಡೆ ಮಾಡಿದೆ.

‘ಅಧ್ಯಾತ್ಮ ನಾಯಕ ಸ್ವಾಮಿ ವಿವೇಕಾನಂದ, ಆರ್ಯಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ, ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಶ್ರೀರಾಮ್ ಶರ್ಮಾ ಅವರ ಜೀವನಚರಿತ್ರೆಗಳನ್ನು 9ರಿಂದ 12ನೇ ತರಗತಿಯ ನೀತಿಬೋಧೆ ಪಠ್ಯಕ್ರಮದಲ್ಲಿ  ಸೇರಿಸಲಾಗಿದೆ’ ಎಂದು ಉತ್ತರ‌ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (ಯುಪಿಎಂಎಸ್‌ಪಿ) ಕಾರ್ಯದರ್ಶಿ ದಿವ್ಯಕಾಂತ್ ಶುಕ್ಲಾ ತಿಳಿಸಿದ್ದಾರೆ.

‘2023–24ರ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ಈ ನಾಯಕರ ಜೀವನಚರಿತ್ರೆಯನ್ನು ಪಠ್ಯದಲ್ಲಿ ಓದಲಿದ್ದಾರೆ. ಇದನ್ನು ಹೊರತುಪಡಿಸಿದರೆ ಕಂಪ್ಯೂಟರ್ ಪಠ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅಳವಡಿಸಲಾಗಿದೆ’  ಎಂದೂ ಅವರು ಹೇಳಿದ್ದಾರೆ. 

ADVERTISEMENT

ಪಠ್ಯಕ್ರಮದಲ್ಲಿ ಹೊಸ ವಿಷಯಗಳನ್ನು ಸೇರಿಸುವುದರ ಹಿಂದಿನ ಉದ್ದೇಶ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಿದೆ. 9ನೇ ತರಗತಿಯ ಪಠ್ಯಕ್ರಮದಲ್ಲಿ ಸೂರ್ಯ ನಮಸ್ಕಾರ, ಆಸನಗಳು, ಮುದ್ರೆಗಳು ಮತ್ತು ಪ್ರಾಣಾಯಾಮಗಳನ್ನು ಸೇರಿಸಲಾಗಿದೆ. ಇದರೊಂದಿಗೆ ಅಷ್ಟಾಂಗ ಯೋಗವನ್ನು ಸಹ ವಿವರವಾಗಿ ವಿವರಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.