ಲಖ್ನೋ: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಉತ್ತರ ಪ್ರದೇಶದ ವಿವಿಧೆಡೆ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಲಾಗಿದ್ದು, ಒಟ್ಟು 50 ಲಕ್ಷ ರೂ. ನಷ್ಟ ತುಂಬಿಸಿಕೊಡುವಂತೆ 130 ಮಂದಿಗೆ ನೋಟೀಸ್ ನೀಡಲಾಗಿದೆ.
ಶುಕ್ರವಾರದ "ಹಿಂಸಾತ್ಮಕ" ಪ್ರತಿಭಟನೆ ಸಂದರ್ಭದಲ್ಲಿ ಪಾತ್ರವಿದೆ ಎಂಬ ಆರೋಪದಲ್ಲಿ ಬುಧವಾರ ರಾಮಪುರದಲ್ಲಿ 28 ಮಂದಿಗೆ, ಸಂಭಾಲ್‌ನಲ್ಲಿ 26, ಬಿಜ್ನೋರ್‌ನಲ್ಲಿ 43 ಹಾಗೂ ಗೋರಖ್‌ಪುರದಲ್ಲಿ 33 ಮಂದಿಗೆ ಜಿಲ್ಲಾಡಳಿತಗಳುನೋಟೀಸ್ ಜಾರಿ ಮಾಡಿದ್ದು, ನಷ್ಟ ಭರ್ತಿ ಮಾಡಿಕೊಡದಿದ್ದರೆ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಕಲ್ಲುಗಳನ್ನು ಎಸೆದು, ಬಸ್ಸು, ಪೊಲೀಸ್ ವಾಹನ ಮತ್ತಿತರ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದವರನ್ನು ವಿಡಿಯೊ ಹಾಗೂ ಫೋಟೋಗಳ ಮೂಲಕ ಗುರುತಿಸಲಾಗಿದೆ. ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಇಷ್ಟೇ ಅಲ್ಲದೆ, ಯಾವ ಇಲಾಖೆಗಳಲ್ಲಿ ಎಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಸಾರಿಗೆ, ಲೋಕೋಪಯೋಗಿ, ನಗರಪಾಲಿಕೆ ಮುಂತಾದ ಸರಕಾರಿ ಇಲಾಖೆಗಳನ್ನು ಕೇಳಿಕೊಂಡಿದ್ದೇವೆ. ಈ ಕುರಿತು ವರದಿ ಕೇಳಲಾಗಿದೆ ಎಂದು ರಾಂಪುರ ಜಿಲ್ಲಾಧಿಕಾರಿ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.
ರಾಂಪುರ ಜಿಲ್ಲೆಯಲ್ಲಿ ಸುಮಾರು 14.86 ಲಕ್ಷದಷ್ಟು ನಷ್ಟವನ್ನು ಅಂದಾಜಿಸಲಾಗಿದೆ. ಇದರಲ್ಲಿ ಪೊಲೀಸ್ ವಾಹನಗಳು, ಪೊಲೀಸ್ ತಡೆಗೋಡೆಗಳು ಮತ್ತು ವೈರ್‌ಲೆಸ್ ಸೆಟ್, ಧ್ವನಿವರ್ಧಕಗಳು, ಪೊಲೀಸರ ಲಾಠಿ, ಹೆಲ್ಮೆಟ್, ದೇಹರಕ್ಷಣಾ ಕವಚಗಳು ಮತ್ತು ಬೆತ್ತದ ಶೀಲ್ಡ್‌ಗಳು ಒಳಗೊಂಡಿವೆ.
ಸಂಭಾಲ್‌ನಲ್ಲಿ ಸುಮಾರು 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದ್ದು, ಹೆಚ್ಚಿನ ಗಲಭೆಕೋರರನ್ನು ಬಂಧಿಸಲಾಗಿದೆ. ಬಿಜ್ನೋರ್‌ನಲ್ಲಿ ಇದುವರೆಗೆ ಸುಮಾರು 19.7 ಲಕ್ಷ ರೂ. ನಷ್ಟ ಅಂದಾಜಿಸಲಾಗಿದ್ದು, ನೋಟೀಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ನೋಟೀಸ್ ಪಡೆದವರು ಪೊಲೀಸ್ ಠಾಣೆಗೆ ಬಂದು ತಮ್ಮ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿದೆ, ವಿಫಲವಾದಲ್ಲಿ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ತಮ್ಮ ಪಾತ್ರ ಇರಲಿಲ್ಲ ಎಂದು ಕೆಲವು ಆರೋಪಿಗಳು ಹೇಳಿದ್ದಾರೆ. ಬಂಧಿತರಾಗಿರುವ ಕೆಲವರ ಕುಟುಂಬಿಕರು ಬಡವರಾಗಿದ್ದು, ವಕೀಲರನ್ನು ಗೊತ್ತುಪಡಿಸಲೂ ಅವರಿಗೆ ಸಮಸ್ಯೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.