ಲಖನೌ: 'ಜನರಿಗೆ ನೀಡಿದ್ದ ಭರವಸೆಗಳನ್ನು ಡಬಲ್ ಎಂಜಿನ್ ಸರ್ಕಾರ ಈಡೇರಿಸಿದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಶನಿವಾರ ಬಿಜೆಪಿ ಚುನಾವಣಾ 'ಪ್ರಚಾರ ಯಾತ್ರೆ'ಗೆ ಚಾಲನೆ ನೀಡಿದ ಯೋಗಿ ಆದಿತ್ಯನಾಥ್, 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದ ಮೂಲಕ ಬಿಜೆಪಿ ಸರ್ಕಾರ ಜನರ ಅಭಿವೃದ್ಧಿಯನ್ನು ಖಾತ್ರಿಪಡಿಸಿದೆ' ಎಂದರು.
'25 ಕೋಟಿ ಜನರಿರುವ ರಾಜ್ಯದಲ್ಲಿ 2017ರ ಮೊದಲು ಉದ್ಯಮಿಗಳು ಮತ್ತು ನಾಗರಿಕರು ವಲಸೆ ಹೋಗುತ್ತಿದ್ದರು. ಕಾರಣ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದವು. ಆದರೆ ಈಗ ಟ್ರೆಂಡ್ ಬದಲಾಗಿದೆ. 2017ರ ನಂತರ ಅಪರಾಧಿಗಳು ವಲಸೆ ಹೋಗುತ್ತಿದ್ದಾರೆ. ರಾಜ್ಯವು ರಾಷ್ಟ್ರದ ಪ್ರಧಾನ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ' ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
'ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರದ ಕೊಡುಗೆಗಳು ಎಲ್ಲ ಕಡೆಗಳಲ್ಲೂ ಕಾಣಸಿಗುತ್ತಿವೆ. ಹಳ್ಳಿಗಳ ಅಭಿವೃದ್ಧಿ, ಬಡವರ ಏಳ್ಗೆಗೆ, ರೈತರ ಅಭ್ಯುದಯಕ್ಕೆ, ಯುವಕರ ನೌಕರಿಗೆ, ತಾಯಂದಿರು ಮತ್ತು ಪುತ್ರಿಯರ ರಕ್ಷಣೆಗೆ ಬದ್ಧರಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದ್ದೇವೆ. ಆದ್ದರಿಂದ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಸಾಧ್ಯವಾಗಿದೆ' ಎಂದು ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯದ 403 ಕ್ಷೇತ್ರಗಳಿಗೆ ಪ್ರಚಾರ ಯಾತ್ರೆ ಸಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.