ಅಯೋಧ್ಯೆ: ತಮಿಳುನಾಡು ಕ್ರೀಡಾ ಸಚಿವ ಹಾಗೂ ನಟ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಗೆ ಹಲವು ಹಿಂದೂ ಸ್ವಾಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಅಯೋಧ್ಯೆಯ ಸ್ವಾಮೀಜಿ ಒಬ್ಬರು ಉದಯನಿಧಿಗೆ ಜೀವ ಬೆದರಿಕೆ ಒಡ್ಡಿದ್ದಾರೆ.
ಅಯೋಧ್ಯೆಯ ತಪಸ್ವಿ ಛವನಿ ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಪರಮಹಂಸ ಆಚಾರ್ಯ ಸ್ವಾಮೀಜಿ ಅವರೇ ಉದಯನಿಧಿಗೆ ಜೀವ ಬೆದರಿಕೆ ಹಾಕಿದ್ದಾರೆ.
‘ಉದಯನಿಧಿ ಸ್ಟಾಲಿನ್ ಹೇಳಿಕೆ ಹಿಂದೂ ಧರ್ಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಅವರ ತಲೆ ಕಡಿದು ತಂದು ಕೊಟ್ಟವರಿಗೆ ₹ 10 ಕೋಟಿ ಕೊಡುತ್ತೇನೆ. ಇಲ್ಲದಿದ್ದರೆ, ನಾನೇ ಅವನನ್ನು ಹುಡುಕಿ ಕೊಲ್ಲುತ್ತೇನೆ’ ಎಂದು ಪರಮಹಂಸ ಆಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಈ ಸ್ವಾಮೀಜಿ ಈ ಹಿಂದೆಯೂ ಕೂಡ ವಿವಾದಿತ ಹೇಳಿಕೆ ನೀಡಿದ್ದರು. ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಟ ಶಾರುಕ್ ಖಾನ್ ಅವರನ್ನು ಜೀವಂತ ಸುಡುತ್ತೇನೆ ಎಂದು ಹೇಳಿದ್ದರು.
ಓದಿ: ಉದಯನಿಧಿ ಸ್ಟಾಲಿನ್ ತಲೆಗೆ ಬಹುಮಾನ ಘೋಷಿಸಿದ್ದ ಸ್ವಾಮೀಜಿ ಪ್ರತಿಕೃತಿ ದಹನ
ಇನ್ನೊಂದೆಡೆ ತಮ್ಮ ವಿವಾದಿತ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಉದಯನಿಧಿ ಅವರು, ‘ಸನಾತನ ಧರ್ಮದ ವಿರುದ್ಧ ಮಾತನಾಡುವುದನ್ನು, ಅದನ್ನು ವಿರೋಧಿಸುವುದನ್ನು ಮುಂದುವರಿಸುತ್ತೇನೆ. ಈ ವಿಷಯದಲ್ಲಿ ಎಷ್ಟು ಪ್ರಕರಣ ದಾಖಲಾದರೂ ಎದುರಿಸಲು ನಾನು ಸಿದ್ಧ’ ಎಂದು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
‘ಆದರೆ, ಯಾವುದೇ ಸಮುದಾಯದ ಹತ್ಯಾಕಾಂಡ ಮಾಡಬೇಕು ಎಂದು ನಾನು ಎಂದಿಗೂ ಹೇಳಿಲ್ಲ. ಸನಾತನ ಧರ್ಮದ ನಿರ್ಮೂಲನೆ ಕುರಿತಂತೆ ಭಾನುವಾರ ನಾನು ಹೇಳಿರುವ ಮಾತುಗಳಿಗೆ ಈಗಲೂ ಬದ್ಧನಾಗಿದ್ದೇನೆ’ಎಂದು ಸೋಮವಾರ ಸ್ಪಷ್ಟಪಡಿಸಿದರು.
ವಿಸಿಕೆ ಬೆಂಬಲ: ಡಿಎಂಕೆ ಮೈತ್ರಿ ಪಕ್ಷವಾದ ವಿಡುತಲೈ ಚಿರುತೈಗಲ್ ಕಾಟ್ಚಿ (ವಿಸಿಕೆ) ಉದಯನಿಧಿ ಅವರನ್ನು ಬೆಂಬಲಿಸಿದೆ. ಪಕ್ಷದ ನಾಯಕ ತೋಲ್ ತಿರುಮವಲವನ್, ‘ಸನಾತನಧರ್ಮ ವಿರೋಧಿಸುವುದು ಎಂದರೆ ಹಿಂದುತ್ವವನ್ನು ವಿರೋಧಿಸುವುದು ಎಂದರ್ಥವಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.