ಇಟಾವಾ: ಆಗ್ರಾ– ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ವೇಳೆ ಬಿಜೆಪಿಯ ಶಾಸಕಿಯೊಬ್ಬರು ರೈಲ್ವೆ ಹಳಿಗೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಟಾವಾ ಶಾಸಕಿ ಸರಿತಾ ಭದೌರಿಯಾ ಹಳಿಗೆ ಬಿದ್ದಿದ್ದಾರೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಹೊಸ ರೈಲು ನೋಡಲು ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ಜನಸ್ತೋಮ ನೆರೆದಿತ್ತು. ವ್ಯಕ್ತಿಯೊಬ್ಬರು ರೈಲಿಗೆ ಹಸಿರು ನಿಶಾನೆ ತೋರುತ್ತಿದ್ದಂತೆ ರೈಲು ನೋಡಲು ಜನ ಮುಗಿಬಿದ್ದಿದ್ದಾರೆ. ಈ ವೇಳೆ ಶಾಸಕಿ ಸರಿತಾ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಮೇಲಕ್ಕೆತ್ತಿದ್ದಾರೆ.
ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಇಟಾವಾ ಘಟಕದ ಖಜಾಂಜಿ ಸಂಜೀವ್ ಭದೌರಿಯಾ,‘ಸರಿತಾ ಅವರು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಾಹ್ಯವಾಗಿ ಯಾವುದೇ ಗಾಯಗಳಾಗಿಲ್ಲ. ದೇಹದಲ್ಲಿ ಆಂತರಿಕವಾಗಿ ಪೆಟ್ಟಾಗಿದ್ದರೆ ತಪಾಸಣೆಯ ಬಳಿಕ ತಿಳಿದುಬರಲಿದೆ‘ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.