ಲಖನೌ (ಉತ್ತರ ಪ್ರದೇಶ): ಅಂಬೇಡ್ಕರ್ ನಗರ ಜಿಲ್ಲೆಯ ಕಟೇಹ್ರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಧರ್ಮರಾಜ್ ನಿಶಾದ್ ಅವರು, ತಮ್ಮನ್ನು ಗೆಲ್ಲಿಸಿ ಇಲ್ಲವೇ ಸಾಯಲು ಬಿಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.
ನಿಶಾದ್ ಅವರು, 'ಒಂದೋ ನನ್ನನ್ನು ವಿಜಯಶಾಲಿಯನ್ನಾಗಿ ಮಾಡಿ ಇಲ್ಲವೇ, ಮರಣಶಯ್ಯೆಯಲ್ಲಿ ಮಲಗುವಂತೆ ಮಾಡಿ' ಎಂದು ಭೋಜಪುರಿ ಭಾಷೆಯಲ್ಲಿ ಹೇಳಿದ್ದಾರೆ. ಅವರ ಹೇಳಿಕೆಯನ್ನೊಳಗೊಂಡ ಪೋಸ್ಟರ್‌ಗಳನ್ನೂ ಕ್ಷೇತ್ರದಾದ್ಯಂತ ಹಲವೆಡೆ ಅಂಟಿಸಲಾಗಿದೆ.
ಕೇಸರಿ ಪಕ್ಷದ ಅಭ್ಯರ್ಥಿಯು ಮತದಾರರನ್ನುದ್ದೇಶಿಸಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಎದುರಾಳಿ ಅಭ್ಯರ್ಥಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕತ್ವ ಸಹ, ನಿಶಾದ್ ಅವರ ಹೇಳಿಕೆಗಳು ಹಾಗೂ ಪೋಸ್ಟರ್‌ಗಳಿಂದ ಅಂತರ ಕಾಯ್ದುಕೊಂಡಿದೆ.
ಟೀಕೆಗಳು ಹಾಗೂ ನಾಯಕರು ಒತ್ತಡ ಹೇರಿದ ಕಾರಣ ಈ ಕುರಿತು ಪ್ರತಿಕ್ರಿಯಿಸಿರುವ ನಿಶಾದ್, ತಾವು ಆ ರೀತಿ ಹೇಳಿಯೇ ಇಲ್ಲ. ಇವೆಲ್ಲ ಎದುರಾಳಿಗಳು ಮಾಡುತ್ತಿರುವ ಪಿತೂರಿ ಎಂದು ಆರೋಪಿಸಿದ್ದಾರೆ. 'ನನ್ನ ಎದುರಾಳಿಗಳು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
'ನಾನು ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಅವರ ಮನಗೊಂದಿಗೆ ಮಾತನಾಡಿದ್ದೇನೆ. ಅವರು ಅಂತಹ ಪೋಸ್ಟರ್‌ಗಳನ್ನು ಅಂಟಿಸಿಲ್ಲ ಎಂಬುದಾಗಿ ಹೇಳಿದ್ದಾರೆ' ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ತ್ರಯಂಬಕ ತಿವಾರಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ (ಎಸ್‌ಪಿ) ಜಿಲ್ಲಾ ಘಟಕದ ಅಧ್ಯಕ್ಷ ಜಾಂಗ್ ಬಹದ್ದೂರ್ ಯಾದವ್ ಅವರು, ಇದು ಬಿಜೆಪಿಯು ದುಸ್ಥಿತಿಯಲ್ಲಿದೆ ಎಂಬುದನ್ನು ಹಾಗೂ ನಿಶಾದ್ ಅವರ ಹತಾಶೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಉತ್ತರ ಪ್ರದೇಶದ 9 ಕ್ಷೇತ್ರಗಳ ಉಪ ಚುನಾವಣೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.