ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸದ್ಯ ಖಾಲಿ ಇರುವ 10 ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಘೋಷಿಸಿದ್ದಾರೆ.
ಈ ಸಂಬಂಧ ಮಾಯಾವತಿ ಅವರು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೂ ಸಭೆ ನಡೆಸಿದ್ದಾರೆ. ಉಪಚುನಾವಣೆ ನಡೆಯಲಿರುವ ಎಲ್ಲ 10 ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತನ್ನ ವೈಫಲ್ಯವನ್ನು ಮುಚ್ಚಿಡುವುದಕ್ಕಾಗಿ ‘ಬುಲ್ಡೋಜರ್ ರಾಜಕಾರಣ’ ಮಾಡುತ್ತಿದೆ. ಸಮುದಾಯಗಳ ನಡುವೆ ಒಡಕು ಮೂಡಿಸಿ ಕೋಮು ಸಂಘರ್ಷ ಉಂಟುಮಾಡಲು ನಿರಂತರವಾಗಿ ಸಂಚು ಹೂಡುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 9 ಮಂದಿ ಶಾಸಕರು ಲೋಕಭೆಗೆ ಆಯ್ಕೆಯಾದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಸಮಾವ್ ಕ್ಷೇತ್ರದ ಎಸ್‌ಪಿ ಶಾಸಕರಾಗಿದ್ದ ಇರ್ಫಾನ್ ಸೋಳಂಕಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರಿಂದ ಅನರ್ಹಗೊಂಡಿದ್ದರು. ಚುನಾವಣಾ ಆಯೋಗವು ಈ ಕ್ಷೇತ್ರಗಳಿಗೆ ಇನ್ನಷ್ಟೇ ಉಪಚುನಾವಣೆ ದಿನಾಂಕವನ್ನು ಘೋಷಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.