ಲಖನೌ: ಈಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗವು ನಕಲಿ ಮತದಾನವನ್ನು ಸಂಪೂರ್ಣವಾಗಿ ನಿಲ್ಲಿಸಲು ಕ್ರಮಕೈಗೊಳ್ಳುವವರೆಗೆ ನಮ್ಮ ಪಕ್ಷ ಮುಂದಿನ ಉಪಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ' ಎಂದು ತಿಳಿಸಿದ್ದಾರೆ.
ಈ ಬಾರಿ ನಡೆದ ಚುನಾವಣೆ ವೇಳೆ ಮತ ಯಂತ್ರಗಳನ್ನು ದುರ್ಬಳಕೆ ಮಾಡಲಾಗಿದೆ. ನಮ್ಮ ಪಕ್ಷವನ್ನು (ಬಿಎಸ್‌ಪಿ) ದುರ್ಬಲಗೊಳಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಬಿಎಸ್‌ಪಿಯನ್ನು ಮಟ್ಟ ಹಾಕಬೇಕು ಎಂದು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಮಾಯಾವತಿ ಅವರು ಆಜಾದ್ ಸಮಾಜ ಪಕ್ಷದ ಸಂಸ್ಥಾಪಕ ಮತ್ತು ಲೋಕಸಭಾ ಸಂಸದ ಚಂದ್ರಶೇಖರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಉಪಚುನಾವಣೆಯಲ್ಲಿ ಸಣ್ಣ ಪಕ್ಷಗಳನ್ನು ಬೆಂಬಲಿಸದಂತೆ ದಲಿತ ಸಮುದಾಯಕ್ಕೆ ಸೂಚಿಸಿದ್ದರು. ಆಜಾದ್ ಸಮಾಜ ಪಕ್ಷ ಇತರ ಪಕ್ಷಗಳ ಇಚ್ಛೆಯ ಮೇರೆಗೆ ರೂಪುಗೊಂಡಿದೆ ಎಂದು ಕಿಡಿಕಾರಿದ್ದಾರೆ.
ದಲಿತ ಸಮುದಾಯದ ಕೆಲವರು ತಮ್ಮನ್ನು ‘ಮಾರಾಟ’ ಮಾಡಿಕೊಂಡಿದ್ದಾರೆ ಎಂದೂ ಚಂದ್ರಶೇಖರ್ ವಿರುದ್ಧ ಮಾಯಾವತಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲಾ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಅಲ್ಲದೆ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 14 ವರ್ಷಗಳ ಬಳಿಕ ವಿಧಾನಸಭಾ ಉಪಚುನಾವಣೆ ಕಣಕ್ಕೆ ಬಿಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.