ನವದೆಹಲಿ: ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಮತ್ತು ಅವರನ್ನು ಮತದಾನ ಮಾಡದಂತೆ ತಡೆದ ಆರೋಪಗಳ ಮೇರೆಗೆ ಚುನಾವಣಾ ಆಯೋಗವು ಅಲ್ಲಿನ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದ ಎಲ್ಲ ಪೊಲೀಸ್ ಅಧಿಕಾರಿಗಳನ್ನು ವಿಡಿಯೊ ಸಾಕ್ಷ್ಯ ಆಧರಿಸಿ ಅಮಾನತುಗೊಳಿಸುವಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ‘ಎಕ್ಸ್’ನಲ್ಲಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.
ಮುಜಾಫರ್‌ನಗರ ಜಿಲ್ಲೆಯ ಮೀರಾಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುಂಬುಲ್ ರಾಣಾ ಅವರು ಅಪ್‌ಲೋಡ್ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿರುವ ಅಖಿಲೇಶ್ ಅವರು, ಪೊಲೀಸ್ ಸಿಬ್ಬಂದಿಯು ಜನರು ಮತದಾನ ಮಾಡುವುದನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕ್ಷೇತ್ರದ ನಯಾಗಾಂವ್, ನಾಗ್ಲಾ ಬುಜುಕ್ ಸೇರಿದಂತೆ ಇತರೆಡೆ ಈ ರೀತಿಯ ದೂರುಗಳು ಬರುತ್ತಿವೆ ಎಂದು ರಾಣಾ ದೂರಿದ್ದಾರೆ.
ಆಯೋಗದ ಕಟ್ಟು ನಿಟ್ಟಿನ ಸೂಚನೆ:
ಸಮಾಜವಾದಿ ಪಕ್ಷದ ಮುಖ್ಯಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಉತ್ತರ ಪ್ರದೇಶದ ಎಲ್ಲ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿರುವ ಅವರು, ಪೂರ್ವಗ್ರಹ ಪೀಡಿತರಾಗಿ ನಡೆದುಕೊಳ್ಳುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರನ್ನು ಪರಿಶೀಲಿಸಿ ಸಂಬಂಧಿಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಆಯೋಗದ ಮಧ್ಯ ಪ್ರವೇಶಕ್ಕೆ ಬಿಜೆಪಿ ಕರೆ
ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಬುರ್ಖಾ ಧರಿಸಿದ ಕೆಲ ಮಹಿಳಾ ಮತದಾರರ ಮುಖಗಳು ಅವರ ಗುರುತಿನ ಚೀಟಿಗಳೊಂದಿಗೆ ಹೊಂದಿಕೆ ಆಗುತ್ತಿಲ್ಲ. ಹೀಗಾಗಿ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಈ ನಿಟ್ಟಿನಲ್ಲಿ ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿಯು ಆಯೋಗ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೋಲುವ ಭೀತಿಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರ ಮನೀಶ್ ಶುಕ್ಲಾ ತಿರುಗೇಟು ನೀಡಿದ್ದಾರೆ.
ಆರೋಪ ಪ್ರತ್ಯಾರೋಪ
ಉಪ ಚುನಾವಣೆಯಲ್ಲಿ ಅಕ್ರಮ ನಿಯಮ ಉಲ್ಲಂಘನೆ ಮತ್ತು ಗೂಂಡಾಗಿರಿ ಚಟುವಟಿಕೆಗಳು ನಡೆದಿವೆ ಎಂದು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು ಪರಸ್ಪರರ ವಿರುದ್ಧ ಆರೋಪ ಮಾಡಿವೆ. ಬಿಜೆಪಿ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ನಿಯಮಗಳ ಉಲ್ಲಂಘನೆ ಮಾಡಿದೆ ಎಂದು ಎಸ್‌ಪಿ ಆರೋಪಿಸಿದ್ದರೆ ಎಸ್.ಪಿಯು ಗೂಂಡಾಗಿರಿ ಚಟುವಟಿಕೆ ಮತ್ತು ಬುರ್ಖಾ ಬಳಸಿ ನಕಲಿ ಮತದಾನ ನಡೆಸುವಲ್ಲಿ ತೊಡಗಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.
ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ಅಕ್ರಮ ಮತ್ತು ನಿಯಮ ಉಲ್ಲಂಘನೆಯಲ್ಲಿ ತೊಡಗಿದೆ. ಹಲವು ಕ್ಷೇತ್ರಗಳಲ್ಲಿನ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ.ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ನಕಲಿ ಮತದಾರರಿಂದ ಮತದಾನ ಮಾಡಿಸುವುದು ಸಮಾಜವಾದಿ ಪಕ್ಷದ ಟ್ರೇಡ್‌ಮಾರ್ಕ್ ಆಗಿದೆ. ಈ ಪಕ್ಷದರು ಉಪ ಚುನಾವಣೆಯಲ್ಲಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆಭೂಪೇಂದ್ರ ಸಿಂಗ್ ಚೌಧರಿ, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.