ಲಖನೌ: ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಮಾಜವಾದಿ ಪಕ್ಷವು ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರು ಮಾಡಿದೆ.
ಕರ್ಹಾಲ್ ಕ್ಷೇತ್ರದಿಂದ ತೇಜ್ ಪ್ರತಾಪ್ ಯಾದವ್ ಅವರನ್ನು ಕಣಕ್ಕಿಳಿಸಿದರೆ, ಸೀಸಮಾವು ಕ್ಷೇತ್ರದಿಂದ ಜೈಲಿನಲ್ಲಿರುವ ಪಕ್ಷದ ನಾಯಕ ಇರ್ಫಾನ್ ಸೋಲಂಕಿ ಅವರ ಪತ್ನಿ ನಸೀಮ್ ಸೋಲಂಕಿ ಅವರಿಗೆ ಟಿಕೆಟ್ ಘೋಷಿಸಿದೆ. ಮಿಲ್ಕಿಪುರದಿಂದ ಸಂಸದ ಅವಧೇಶ್ ಪ್ರಸಾದ್ ಅವರ ಮಗ ಅಜಿತ್ ಪ್ರಸಾದ್ ಅವರಿಗೆ, ಫುಲ್ಪುರದಿಂದ ಮುಸ್ತಫಾ ಸಿದ್ದಿಕಿ ಅವರಿಗೆ ಟಿಕಟ್ ನೀಡಿದೆ.
ಶೋಭವಾಯಿ ವರ್ಮಾ ಮತ್ತು ಜ್ಯೋತಿ ಬಿಂದ್ ಅವರಿಗೆ ಕ್ರಮವಾಗಿ ಕತೇಹಾರಿ ಮತ್ತು ಮಜವಾನ್ ಕ್ಷೇತ್ರಗಳ ಟಿಕೆಟ್ ಘೋಷಿಸಿದೆ.
ಕತೇಹಾರಿ, ಕರ್ಹಾಲ್, ಮಿಲ್ಕಿಪುರ, ಮೀರಾಪುರ, ಗಾಜಿಯಾಬಾದ್, ಮಜವಾನ್, ಖೈರ್, ಫುಲ್ಪುರ ಮತ್ತು ಕುಂದರ್ಕಿ ಕ್ಷೇತ್ರಗಳ ಶಾಸಕರು ಸಂಸದರಾಗಿ ಆಯ್ಕೆಯಾದ ಕಾರಣ ಈ ಕ್ಷೇತ್ರಗಳು ತೆರವಾಗಿದ್ದವು. ಕ್ರಿಮಿನಲ್ ಪ್ರಕರಣದಲ್ಲಿ ಸೀಸಮಾವು ಶಾಸಕ ಇರ್ಫಾನ್ ಸೋಲಂಕಿ ಅವರು ಜೈಲು ಸೇರಿ ಅನರ್ಹಗೊಂಡಿದ್ದರಿಂದ ಈ ಕ್ಷೇತ್ರವೂ ತೆರವಾಗಿತ್ತು.
ಆರು ಕ್ಷೇತ್ರಗಳಿಗೆ ಎಸ್‌ಪಿ ಟಿಕೆಟ್ ಅಂತಿಮಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ‘ಹರಿಯಾಣದ ಫಲಿತಾಂಶವು ಪರಿಣಾಮ ಬೀರಿದ್ದು, ಕಾಂಗ್ರೆಸ್ ಬೇಡಿಕೆ ಇಟ್ಟಿದ್ದ ಸ್ಥಾನಗಳಿಗೆ ಅಭ್ಯರ್ಥಿ ಘೋಷಿಸುವ ಮೂಲಕ ಎಸ್‌ಪಿ ಕಾಂಗ್ರೆಸ್‌ಗೆ ಅದರ ಸ್ಥಾನ ಏನೆಂಬುದನ್ನು ತಿಳಿಸಿದೆ’ ಎಂದಿದ್ದಾರೆ.
ಉಪಚುನಾವಣೆಗೆ ಅಧಿಕೃತ ದಿನಾಂಕವನ್ನು ಚುನಾವಣಾ ಆಯೋಗವು ಇನ್ನಷ್ಟೆ ಪ್ರಕಟಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.