ಸುಲ್ತಾನಪುರ(ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಹೊಲಿದಿದ್ದ ಚಪ್ಪಲಿಗಳನ್ನು ₹10 ಲಕ್ಷ ಕೊಟ್ಟು ಖರೀದಿಸಲು ಕೆಲವರು ಮುಂದೆ ಬಂದಿದ್ದರೂ, ಅವುಗಳನ್ನು ಮಾರಾಟ ಮಾಡುವುದಕ್ಕೆ ಇಲ್ಲಿನ ಚಮ್ಮಾರ ರಾಮ್ ಚೇತ್ ನಿರಾಕರಿಸಿದ್ದಾರೆ.
‘ರಾಹುಲ್ ಗಾಂಧಿ ಹೊಲಿದಿರುವ ಈ ಚಪ್ಪಲಿಗಳನ್ನು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿ, ಅವುಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಜೋಪಾನವಾಗಿಡುತ್ತೇನೆ’ ಎಂದು ರಾಮ್ ಚೇತ್ ಹೇಳಿದ್ದಾರೆ.
ರಾಮ್ ಚೇತ್ ಅವರು ಈಗ ತಮ್ಮೂರಿನಲ್ಲಿ ‘ಸೆಲೆಬ್ರಿಟಿ’ ಆಗಿದ್ದಾರೆ. ಅವರ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದೇ ಇದಕ್ಕೆ ಕಾರಣ.
ಸುಲ್ತಾನಪುರದ ಹೊರವಲಯದ ವಿಧಾಯಕನಗರದಲ್ಲಿ ರಾಮ್ ಚೇತ್ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಜುಲೈ 26ರಂದು ಆ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿ, ಅವರ ಕುಟುಂಬ ಹಾಗೂ ಕಷ್ಟಗಳ ಕುರಿತು ಮಾತನಾಡಿದ್ದರು.
ಅದೇ ವೇಳೆ, ಚಪ್ಪಲಿಯನ್ನು ಹೊಲಿದಿದ್ದ ರಾಹುಲ್ ಗಾಂಧಿ, ಶೂ ಕೂಡ ಸಿದ್ಧಪಡಿಸಿದ್ದರು.
‘ರಾಹುಲ್ ಗಾಂಧಿ ಅವರು ಭೇಟಿ ನೀಡಿದ ನಂತರ ನನ್ನ ಅದೃಷ್ಟವೇ ಖುಲಾಯಿಸಿದೆ. ಈ ಮೊದಲು ನಾನು ಯಾರು ಎಂಬುದೇ ಜನರಿಗೆ ತಿಳಿದಿರಲಿಲ್ಲ. ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅಂಗಡಿಗೆ ಬಂದು, ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ರಾಮ್ ಚೇತ್ ಹೇಳುತ್ತಾರೆ.
ಇನ್ನೊಂದೆಡೆ, ರಾಮ್ ಚೇತ್ ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿದ್ದಾರೆ.
‘ರಾಹುಲ್ ಗಾಂಧಿ ಹೊಲಿದಿರುವ ಚಪ್ಪಲಿಗಳನ್ನು ಖರೀದಿಸಲು ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಹಲವರಿಂದ ಕರೆಗಳೂ ಬಂದಿವೆ. ಪ್ರತಾಪಗಢದಿಂದ ಮಂಗಳವಾರ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ₹10 ಲಕ್ಷ ನೀಡಿ ಖರೀದಿಸುವುದಾಗಿ ಹೇಳಿದರು. ಇದು, ಚಪ್ಪಲಿ ಖರೀದಿಗೆ ನೀಡುವುದಾಗಿ ಹೇಳಿದ ಗರಿಷ್ಠ ಮೊತ್ತ’ ಎಂದರು.
‘ಮೊದಲು ಅವರು ₹5 ಲಕ್ಷ ಕೊಡುವುದಾಗಿ ಹೇಳಿದರು. ಮಾರಾಟ ಮಾಡುವುದಕ್ಕೆ ನಾನು ನಿರಾಕರಿಸಿದೆ. ಆಗ, ಅವರು ₹10 ಲಕ್ಷ ನೀಡುವುದಾಗಿ ತಿಳಿಸಿದರು. ಇವು ನನ್ನ ಪಾಲಿಗೆ ಅದೃಷ್ಟದ ಪಾದರಕ್ಷೆಗಳಾಗಿದ್ದು, ಇವುಗಳನ್ನು ನಾನು ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ’ ಎಂದೂ ಹೇಳಿದರು.
‘ನನ್ನೊಂದಿಗೆ ಅಂಗಡಿಯಲ್ಲಿ ಕುಳಿತು, ಚಪ್ಪಲಿ ಹೊಲಿಯುವ ಮೂಲಕ ರಾಹುಲ್ ಗಾಂಧಿ ನನ್ನ ಪಾಲುದಾರರಾಗಿದ್ದಾರೆ’ ಎಂದು ಅಭಿಮಾನದ ನಗೆ ಬೀರಿದರು.
2018ರ ಮೇನಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ, ಸುಲ್ತಾನಪುರದ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಎಂಬುವವರು 2018ರ ಆಗಸ್ಟ್ 4ರಂದು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸಂಸದರ–ಶಾಸಕರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗುವುದಕ್ಕೆ ಸುಲ್ತಾನಪುರಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಮಾರ್ಗ ಮಧ್ಯೆ ರಾಮ್ ಚೇತ್ ಅಂಗಡಿಗೂ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.