ಮಿರ್ಜಾಪುರ(ಉತ್ತರ ಪ್ರದೇಶ): ಮಿರ್ಜಾಪುರ ಜಿಲ್ಲೆಯ ವಿದ್ಯಾವಾಸಿನಿ ದೇವಾಲಯಕ್ಕೆ ಶೂ ಹಾಕಿಕೊಂಡು ಪ್ರವೇಶಿಸಿದ ಆರೋಪದಡಿ ಜಿಲ್ಲಾ ಕೃಷಿ ಅಭಿವೃದ್ಧಿ ಸಹಾಯಕ ಅಧಿಕಾರಿಯನ್ನು(ಎಡಿಒ) ಕೆಲಸದಿಂದ ಅಮಾನತು ಮಾಡಲಾಗಿದೆ.
ಅಲ್ಲದೆ, ನವರಾತ್ರಿ ಸಂದರ್ಭದಲ್ಲಿ ಅಧಿಕೃತ ಕರ್ತವ್ಯವನ್ನು ನಿರ್ವಹಿಸದ ಆರೋಪವೂ ಅವರ ಮೇಲಿದೆ.
ಉಪವಿಭಾಗಾಧಿಕಾರಿಯಾಗಿ ಆಗಿಯೂ ಕೆಲಸ ಮಾಡುತ್ತಿರುವ ಪ್ರತೀಕ್ ಕುಮಾರ್ ಸಿಂಗ್ ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ್ದನ್ನು ಶಾಸಕ ರತ್ನಾಕರ್ ಮಿಶ್ರಾ ಗಮನಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಅಲ್ಲದೆ, ಅಧಿಕಾರಿಗೆ ಛೀಮಾರಿ ಹಾಕಿದ ಶಾಸಕರು, ದೇಗುಲದ ಆವರಣದಿಂದ ಹೊರಗೆ ಕಳುಹಿಸಿದ್ದಾರೆ.
ಘಟನೆಯ ಮಾಹಿತಿ ಬಂದ ಕೂಡಲೇ ಎಡಿಒ ಅಮಾನತಿಗೆ ಮಿರ್ಜಾಪುರ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕೃಷಿ ಇಲಾಖೆಯ ಉಪ ಆಯುಕ್ತ ವಿಕಾಸ್ ಪಟೇಲ್ ಅವರು ಆದೇಶಿಸಿದ್ದಾರೆ.
ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ ಪ್ರತೀಕ್, ದೇಗುಲದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅಲ್ಲದೆ ತಮ್ಮ ಕರ್ತವ್ಯ ಪಾಲನೆಯಲ್ಲೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಹಿತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.