ADVERTISEMENT

ಸುಲ್ತಾನಪುರ ಜಿಲ್ಲೆಗೆ ಕುಶ ಭವನಪುರವೆಂದು ಮರುನಾಮಕರಣ: ಯೋಗಿ ಸರ್ಕಾರ ಸಿದ್ಧತೆ

ಪಿಟಿಐ
Published 28 ಆಗಸ್ಟ್ 2021, 2:22 IST
Last Updated 28 ಆಗಸ್ಟ್ 2021, 2:22 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಸುಲ್ತಾನಪುರ: ಉತ್ತರ ಪ್ರದೇಶ ಸರ್ಕಾರವು ಸುಲ್ತಾನಪುರ ಜಿಲ್ಲೆಗೆ ಕುಶ ಭವನಪುರ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆಸಿದೆ ಎಂದು ಸುಲ್ತಾನಪುರದ ನಗರಸಭೆ ಅಧ್ಯಕ್ಷೆ ಬಬಿತಾ ಜೈಸ್ವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.

'ಜನವರಿ 6, 2018 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಈ ಕುರಿತ ಪ್ರಸ್ತಾಪವನ್ನು ಅಂಗೀಕರಿಸಲಾಗಿತ್ತು ಮತ್ತು ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು' ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಸುಮಾರು ಮೂರು ತಿಂಗಳ ಹಿಂದೆಯಷ್ಟೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಗೆ ಭೇಟಿ ನೀಡಿದಾಗ ಜಿಲ್ಲೆಯ ಹೆಸರನ್ನು ಬದಲಾಯಿಸಲು ಜ್ಞಾಪನಾ ಪತ್ರವನ್ನು ನೀಡಲಾಗಿತ್ತು. ಅದನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ADVERTISEMENT

ಸುಲ್ತಾನಪುರದ ಬಿಜೆಪಿ ಸಂಸದೆ ಮನೇಕಾ ಗಾಂಧಿಯವರ ಮಾಧ್ಯಮ ಉಸ್ತುವಾರಿ ವಿಜಯ್ ಸಿಂಗ್ ರಘುವಂಶಿ ಮಾತನಾಡಿ, ಸುಲ್ತಾನಪುರವನ್ನು ಕುಶ ಭವನಪುರ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯರು ಅವರಿಗೆ ಪತ್ರ ನೀಡಿದ್ದು, ಈ ಬೇಡಿಕೆಗೆ ಸಂಬಂಧಿಸಿದಂತೆ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಕಂದಾಯ ಮಂಡಳಿಯೂ ಇದಕ್ಕೆ ಅನುಮತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯ ಪಕ್ಕದಲ್ಲಿರುವ ಸುಲ್ತಾನಪುರವು ರಾಮಾಯಣದ ಕಾಲದಲ್ಲಿ ದಕ್ಷಿಣ ಕೋಸಲದ ರಾಜಧಾನಿಯಾಗಿತ್ತು. ಭಗವಾನ್ ರಾಮನು 'ಜಲ ಸಮಾಧಿ'ಯಾಗುವ ಮುನ್ನ ತನ್ನ ರಾಜ್ಯವನ್ನು ತನ್ನ ಸಹೋದರರು ಮತ್ತು ಪುತ್ರರಿಗೆ ಹಂಚುತ್ತಾನೆ. ಆಗ ತನ್ನ ಹಿರಿಯ ಮಗನಾದ ಕುಶನಿಗೆ ದಕ್ಷಿಣ ಕೋಸಲವನ್ನು ನೀಡುತ್ತಾನೆ. ಆಗ ಕುಶನು ಗೋಮತಿ ತೀರದಲ್ಲಿ ಹೊಸ ರಾಜಧಾನಿಯನ್ನು ಸ್ಥಾಪಿಸುತ್ತಾನೆ. ಅದನ್ನು ಕುಶ ಭವನಪುರ ಎಂದು ಕರೆಯಲಾಗುತ್ತಿತ್ತು ಎಂದು ನಂಬಲಾಗಿದೆ.

ಗೆಜೆಟಿಯರ್ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಕೂಡ ಇದರ ಉಲ್ಲೇಖವಿದೆ. ಮುಸ್ಲಿಂ ದಾಳಿಕೋರರು ಭಾರತಕ್ಕೆ ಬಂದಾಗ, ಅಲ್ಲಾವುದ್ದೀನ್ ಖಿಲ್ಜಿ ಕುಶ್ ಭವನಪುರ ನಗರವನ್ನು ನಾಶಪಡಿಸಿದರು ಮತ್ತು ಸುಲ್ತಾನಪುರ ಎಂದು ಹೆಸರನ್ನಿಟ್ಟರು ಎಂದು ರಘುವಂಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.