ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ‘ಮಿಷನ್ ಶಕ್ತಿ’ ವಿಫಲವಾಗಿದೆ. ಇಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೂರಿದ್ದಾರೆ.
‘ಯೋಗಿ ಆದಿತ್ಯನಾಥ ಸರ್ಕಾರವು ಮಹಿಳೆಯರ ಸುರಕ್ಷತೆ ಮತ್ತು ಘನತೆ ಕಾಪಾಡುವ ನಿಟ್ಟಿನಲ್ಲಿ ‘ಮಿಷನ್ ಶಕ್ತಿ’ ಅಭಿಯಾನಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ಚಾಲನೆ ನೀಡಿತು. ಈ ಅಭಿಯಾನದಡಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಅವರು,‘ಬೂಟಾಟಿಕೆ ಮತ್ತು ಸುಳ್ಳು ಪ್ರಚಾರಗಳುಸರ್ಕಾರದ ಗುರಿಯಾಗಿದ್ದರೆ, ಈ ರೀತಿಯ ಮಿಷನ್‌ಗಳು ವಿಫಲವಾಗುತ್ತದೆ’ ಎಂದು ದೂರಿದರು.
‘ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ಮಿಷನ್ ಶಕ್ತಿ ವಿಫಲವಾಗಿದೆ.ಇಲ್ಲಿ ಮಹಿಳೆಯೊಬ್ಬರ ಮೇಲೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧ ಘಟನೆ ಸಂಭವಿಸಿದ ಒಂದು ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಉತ್ತರಪ್ರದೇಶದಲ್ಲಿ ಅಪರಾಧಗಳು ಹೆಚ್ಚುತ್ತಿವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬದೋಹಿಯಲ್ಲಿ 21 ವರ್ಷದ ಯುವತಿಯನ್ನು ಮನೆಯೊಳಗೆ ಸುಟ್ಟುಹಾಕಲಾಗಿತ್ತು. ಆದರೆ ಈ ಸಂಬಂಧ ಪ್ರಕರಣವನ್ನು ಒಂದು ತಿಂಗಳ ಬಳಿಕ ದಾಖಲಿಸಲಾಗಿದೆ ಎಂದು ಹೇಳುವ ಮಾಧ್ಯಮ ವರದಿಯನ್ನು ಕೂಡ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.