ಲಖನೌ:ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಕನಿಕಾ ಕಪೂರ್ (41) ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಅರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಔತಣಕೂಟವೊಂದರಲ್ಲಿಪ್ರತಾಪ್ ಸಿಂಗ್ ಹಾಗೂ ಕನಿಕಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಹಾಜರಿದ್ದವರಲ್ಲಿ ಹೆಚ್ಚಿನವರು ರಾಜಕಾರಣಿಗಳು ಮತ್ತು ಸರ್ಕಾರಿಅಧಿಕಾರಿಗಳು ಎಂದು ಹೇಳಲಾಗಿದೆ.
‘ನಾವು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆವು. ಕನಿಕಾ ಅವರಿಗೆಸೋಂಕು ಹರಡಿರುವುದು ಗೊತ್ತಾಗಿದೆ. ಹಾಗಾಗಿ ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದೇನೆ’ ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಗಾಯಕಿ ಕನಿಕಾ ಕಪೂರ್ಗೆ ಕೋವಿಡ್–19
ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ ಸಂಸದ ದುಷ್ಯಂತ್ ಸಿಂಗ್ ಕೂಡ ಭಾಗವಹಿಸಿದ್ದರು. ಅದಾದ ಬಳಿಕ ದುಷ್ಯಂತ್ ಸಂಸತ್ತಿಗೂ ಆಗಮಿಸಿದ್ದರು. ಕನಿಕಾಗೆ ಸೋಂಕು ಇರುವುದು ದೃಡಪಟ್ಟ ಬಳಿಕ, ತಾಯಿ ಮಗ ಪ್ರತ್ಯೇಕವಾಗಿಯೇ ಉಳಿದ್ದಿದ್ದಾರೆ.
'ಲಖನೌದಲ್ಲಿ ನಾನು ನನ್ನ ಮಗ ದುಶ್ಯಂತ್ ಮತ್ತು ಅವನ ಮಾವ ರಾತ್ರಿ ಔತಣಕೂಟದಲ್ಲಿ ಭಾಗಿಯಾಗಿದ್ದೆವು. ದುರದೃಷ್ಟವಶಾತ್ ಕೋವಿಡ್–19 ದೃಢಪಟ್ಟಿರುವ ಕನಿಕಾ ಸಹ ಅಲ್ಲಿ ಅತಿಥಿಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ವಿಷಯ ತಿಳಿದ ಕೂಡಲೇ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ' ಎಂದು ವಸುಂಧರಾ ರಾಜೇ ಟ್ವೀಟ್ ಮಾಡಿದ್ದಾರೆ.
ದುಷ್ಯಂತ್ ಸಂಸತ್ತಿಗೆ ಆಗಮಿಸಿದ್ದುದರಬಗ್ಗೆ ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಓಬ್ರೀನ್ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.