ADVERTISEMENT

ಉತ್ತರ ಪ್ರದೇಶ: ಎನ್‌ಕೌಂಟರ್‌ಗೆ ಸಂಬಂಧಿಸಿದ ನೂತನ ಮಾರ್ಗಸೂಚಿಯಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:04 IST
Last Updated 22 ಅಕ್ಟೋಬರ್ 2024, 14:04 IST
.
.   

ಲಖನೌ: ಉತ್ತರ ಪ್ರದೇಶ ಸರ್ಕಾರವು  ಪೊಲೀಸ್‌ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ನೂತನ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

 ಪೊಲೀಸರು ನೈಜ ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲರಾಗಿ ತಮ್ಮ ತಪ್ಪನ್ನು ಮುಚ್ಚಿಹಾಕಲು ‘ಎನ್‌ಕೌಂಟರ್‌’ ನಡೆಸುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ‘ಎನ್‌ಕೌಂಟರ್‌’ಗೆ ವ್ಯಾಪಕ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸರ್ಕಾರ ಈ ಕ್ರಮ ಕೈಗೊಂಡಿದೆ.

 ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್‌ ಅವರು, ‘ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ನೂತನ ಮಾರ್ಗಸೂಚಿಗೆ ಸಂಬಂಧಿಸಿದಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ 2017ರಿಂದ (ಯೋಗಿ ಆದಿತ್ಯನಾಥ ಅವರ ಸರ್ಕಾರದ ಅವಧಿ) ಈವರೆಗೆ 207  ಆರೋಪಿಗಳನ್ನು ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲಾಗಿದೆ ಎನ್ನುತ್ತವೆ ಅಂಕಿಅಂಶಗಳು.

‘ಕಳೆದ ಏಳು ವರ್ಷಗಳಲ್ಲಿ ಪೊಲೀಸರು ಮತ್ತು ‘ಕ್ರಿಮಿನಲ್‌’ಗಳ ಮಧ್ಯೆ ಸುಮಾರು 12,000 ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ 12 ಮಂದಿ ಪೊಲೀಸರೂ ಮೃತಪಟ್ಟಿದ್ದಾರೆ. 6,500 ಆರೋಪಿಗಳು ಗಾಯಗೊಂಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನೂತನ ಮಾರ್ಗಸೂಚಿ ಏನು?

  • ಎನ್‌ಕೌಂಟರ್‌ನಲ್ಲಿ ‘ಕ್ರಿಮಿನಲ್‌’ ಗಾಯಗೊಂಡರೆ ಅಥವಾ ಮೃತಪಟ್ಟರೆ ಘಟನಾಸ್ಥಳದ ದೃಶ್ಯವನ್ನು ಕಡ್ಡಾಯವಾಗಿ ಚಿತ್ರೀಕರಿಸಬೇಕು.

  • ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಬೇಕು. ಆ ಪ್ರಕ್ರಿಯೆಯನ್ನೂ ಚಿತ್ರೀಕರಿಸಬೇಕು.

  • ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಎನ್‌ಕೌಂಟರ್‌ ನಡೆದ ಸ್ಥಳವನ್ನು ಪರಿಶೀಲಿಸಬೇಕು.

  • ಎನ್‌ಕೌಂಟರ್ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಬರುವ ಪೊಲೀಸ್‌ ಠಾಣೆಗೆ ಆ ಪ್ರಕರಣದ ತನಿಖೆಯ ಜವಾಬ್ದಾರಿ ನೀಡುವಂತಿಲ್ಲ.

  •  ಎನ್‌ಕೌಂಟರ್‌ ನಡೆಸಿದ ಅಧಿಕಾರಿಗಿಂತ ತನಿಖಾಧಿಕಾರಿಯು ಕನಿಷ್ಠ ಒಂದಾದರೂ ಹೆಚ್ಚಿನ ಶ್ರೇಣಿಯನ್ನು ಹೊಂದಿರಬೇಕು.

  • ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಟುಂಬಕ್ಕೆ ತಕ್ಷಣವೇ ಮಾಹಿತಿ ನೀಡಬೇಕು.

  • ಎನ್‌ಕೌಂಟರ್‌ಗೆ ಬಳಸಿ ಸಾಧನವನ್ನು ವಶಕ್ಕೆ ಒಪ್ಪಿಸಿ ಪರಿಶೀಲನೆ ನಡೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.