ಲಕ್ನೊ: ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ ವ್ಯಕ್ತಿಗೆ ಗಂಗಾ ಜಲ ನೀಡಿ, ಗಾಯತ್ರಿ ಮಂತ್ರ ಪಠಿಸಲು ಹೇಳಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೀರತ್ ನಗರದ ನೌಚಂಡಿ ನಗರದಲ್ಲಿ ಈ ಬಗ್ಗೆ ವರದಿಯಾಗಿದ್ದು, ಹಲ್ಲೆಗೊಳಗಾಗಿದ್ದ ವ್ಯಕ್ತಿಯೊಬ್ಬರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭ ಅಲ್ಲಿದ್ದ ಠಾಣಾ ಉಸ್ತುವಾರಿ ಪ್ರೇಮ್‌ಚಂದ್ ಶರ್ಮಾ, ತಮ್ಮೊಂದಿಗೆ ಈ ರೀತಿ ನಡೆದುಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಹಲ್ಲೆ ನಡೆದ ಬಗ್ಗೆ ದೂರು ಸ್ವೀಕರಿಸುವ ಬದಲು, ಠಾಣೆಯಲ್ಲಿ ನನಗೆ ಗಂಗಾ ಜಲ ನೀಡಲಾಯಿತು. ನಂತರ ಉತ್ತರಾಖಂಡದ ಹರಿದ್ವಾರಕ್ಕೆ ಹೋಗಿ ಅಲ್ಲಿನ ಯಾವುದಾದರೂ ಆಶ್ರಮದಲ್ಲಿ ಕೆಲವು ದಿನ ಕಳೆದು ಬರುವಂತೆ ಸೂಚಿಸಲಾಯಿತು ಎಂದು ದೂರು ನೀಡಲು ಹೋಗಿದ್ದ ಹೇಮಂತ್ ಗೋಯಲ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಆಶ್ರಮದಲ್ಲಿ ಪ್ರತಿ ದಿನ ಗಾಯತ್ರಿ ಮಂತ್ರ ಪಠಿಸಿ ಎಂದೂ ಸೂಚಿಸಲಾಗಿತ್ತು. ಅದರಂತೆ ಪ್ರತಿದಿನ ಗಾಯತ್ರಿ ಮಂತ್ರ ಪಠಿಸಿದೆ, ಆದರೆ ಆಶ್ರಮಕ್ಕೆ ಹೋಗಿಲ್ಲ, ಮತ್ತೆ ಹಲ್ಲೆ ನಡೆದಾಗ ದೂರು ನೀಡಲು ಹೋದರೆ ಆಗಲೂ ದೂರು ಸ್ವೀಕರಿಸಲಿಲ್ಲ. ಅದರ ಬದಲು, ನೀವು ತಪ್ಪಾಗಿ ಮಂತ್ರ ಪಠಿಸಿದ್ದೀರಿ ಎಂದು ಪೊಲೀಸ್ ಹೇಳಿದರು ಎಂದು ಗೋಯಲ್ ತಿಳಿಸಿದ್ದಾರೆ.
ಕೊನೆಗೆ ಗೋಯಲ್ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ, ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.