ADVERTISEMENT

ಉತ್ತರ ಪ್ರದೇಶ: ಸರ್ಕಾರಿ ನೌಕರರು ಜೀನ್ಸ್, ಟಿ–ಶರ್ಟ್‌ ಧರಿಸುವಂತಿಲ್ಲ

ಭದೋಹಿ ಜಿಲ್ಲಾಧಿಕಾರಿ ಆದೇಶಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 16:33 IST
Last Updated 13 ಜುಲೈ 2022, 16:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಸರ್ಕಾರಿ ನೌಕರರು ಕಚೇರಿಯಲ್ಲಿ ಜೀನ್ಸ್ ಮತ್ತು ಟಿ–ಶರ್ಟ್‌ ಧರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಆರ್ಯಕ ಅಖೌರಿ ಅವರು ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಇತರೆ ಇಲಾಖೆಗಳ ನೌಕರರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
‘ಸರ್ಕಾರಿ ನೌಕರರು ಕಚೇರಿಗೆ ಜೀನ್ಸ್‌ ಮತ್ತು ಟಿ–ಶರ್ಟ್‌ ಧರಿಸಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಇದು ಸ್ವೀಕಾರಾರ್ಹವಲ್ಲ. ನೌಕರರು ಫಾರ್ಮಲ್ಸ್‌ ಧರಿಸಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಗುರುವಾರದ ನಂತರ ಹಿರಿಯ ಅಧಿಕಾರಿಗಳು ಶಾಲೆ ಮತ್ತಿತರ ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಆದೇಶಕ್ಕೆ ಕೆಲ ಸರ್ಕಾರಿ ನೌಕರರು ವಿರೋಧ ವ್ಯಕ್ತಪಡಿಸಿದ್ದು, ‘ಕೆಲಸದ ಸ್ಥಳದಲ್ಲಿ ಜೀನ್ಸ್‌ ಧರಿಸುವುದರಲ್ಲಿ ತಪ್ಪೇನೂ ಇಲ್ಲ. ಸಭ್ಯವಾದ ವಸ್ತ್ರ ಧರಿಸಿದರೆ ಸಾಕು, ಸರ್ಕಾರಿ ನೌಕರರು ಇಂಥದ್ದೇ ವಸ್ತ್ರ ಧರಿಸಬೇಕೆಂದು ನಿರ್ಬಂಧ ಹೇರುವಂತಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.