ಲಖನೌ: ‘ಜನತಾ ಕರ್ಫ್ಯೂ’ ಪರಿಕಲ್ಪನೆ ಅರ್ಥವೇ ಆಗಿಲ್ಲ ಎಂಬಂತೆ ಉತ್ತರ ಪ್ರದೇಶ ನಗರದ ಕೆಲವು ಹಿರಿಯ ಅಧಿಕಾರಿಗಳು ವರ್ತಿಸಿದ್ದಾರೆ. ಭಾನುವಾರ ಸಂಜೆ ಜನರನ್ನು ಸೇರಿಸಿ ಮೆರವಣಿಗೆ ಮಾಡಿಕೊಂಡು ಶಂಖ ಊದಿದ್ದಾರೆ, ಗಂಟೆ ಬಾರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಮೆರವಣಿಗೆಗಳ ವಿಡಿಯೊ ವೈರಲ್ ಆಗುವ ಮೂಲಕ ಅಧಿಕಾರಿಗಳ ವರ್ತನೆ ಬೆಳಕಿಗೆ ಬಂದಿದೆ.
ಪಿಲಿಭಿತ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಗರದ ಬೀದಿಗಳಲ್ಲಿ ಜನರನ್ನು ಸೇರಿಸಿಕೊಂಡು ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೊಂದು ವಿಡಿಯೊದಲ್ಲಿ, ಕಾನ್ಪುರದ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಇದೇ ರೀತಿ ವರ್ತಿಸಿದ್ದಾರೆ.
ಜನತಾ ಕರ್ಫ್ಯೂವನ್ನು ಸೋಮವಾರ ಬೆಳಗ್ಗಿನವರೆಗೆ ಉತ್ತರ ಪ್ರದೇಶ ಸರ್ಕಾರವು ವಿಸ್ತರಿಸಿತ್ತು. ಅಷ್ಟೇ ಅಲ್ಲದೆ, ಈ ಎರಡೂ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಅಧಿಕಾರಿಗಳ ವರ್ತನೆಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಅವರು ಸ್ಪಷ್ಟೀಕರಣ ನೀಡಿದ್ದಾರೆ. ನಾವು ಬೀದಿಯಲ್ಲಿ ಗಸ್ತು ತಿರುಗುತ್ತಿದ್ದೆವು, ಆಗ ಜನರು ಗಂಟೆ, ಶಂಖಗಳೊಂದಿಗೆ ನಮ್ಮನ್ನು ಸೇರಿಕೊಂಡರು ಎಂದು ಅವರು ಹೇಳಿದ್ದಾರೆ.
ಇದು ‘ಅಸಡ್ಡೆ’ ಮತ್ತು ‘ಬೇಜವಾಬ್ದಾರಿ’ ವರ್ತನೆ ಎಂದು ಪಿಲಿಭಿತ್ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಇತರ ಭಾಗಗಳಲ್ಲಿಯೂ ಜನರು ಮನೆಯಿಂದ ಹೊರಗೆ ಬಂದು ಗುಂಪಾಗಿ ಕಾಣಿಸಿಕೊಂಡಿದ್ದಾರೆ. ಶಂಖ ಊದಿದ್ದಾರೆ ಮತ್ತು ತಟ್ಟೆ ಬಡಿದಿದ್ದಾರೆ. ಅಯೋಧ್ಯೆಯಲ್ಲಿ ವಿವಿಧ ಮಠಗಳ ಸಂತರು ಕೂಡ ಹೊರಗೆ ಬಂದು ಗಂಟೆ ಬಾರಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್19 ಪ್ರಕರಣಗಳ ಸಂಖ್ಯೆ ಸೋಮವಾರ 31ಕ್ಕೆ ಏರಿದೆ. ಇಲ್ಲಿನ 16 ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಅಂತರರಾಜ್ಯ ಬಸ್ ಸೇವೆಗಳನ್ನು ಅಮಾನತು ಮಾಡಲಾಗಿದೆ.
‘ಕೊರೊನಾ’ ಮಗು
ಉತ್ತರ ಪ್ರದೇಶದ ಗೋರಖಪುರದಲ್ಲಿ ಜನಿಸಿದ ಹೆಣ್ಣು ಮಗುವೊಂದಕ್ಕೆ ಹೆತ್ತವರು ‘ಕೊರೊನಾ’ ಎಂದು ಹೆಸರಿಟ್ಟಿದ್ದಾರೆ. ಭಾನುವಾರದ ಜನತಾ ಕರ್ಫ್ಯೂ ಆರಂಭವಾಗುವುದಕ್ಕಿಂತ ಸ್ವಲ್ಪ ಮೊದಲು ಇಲ್ಲಿನ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು.
ಈ ಹೆಸರು ಇರಿಸಿದ್ದನ್ನು ಮಗುವಿನ ಸಂಬಂಧಿಯೊಬ್ಬರು ಹೀಗೆ ಸಮರ್ಥಿಸಿಕೊಂಡಿದ್ದಾರೆ: ‘ಕೊರೊನಾ ವೈರಾಣು ಸಮುದಾಯಗಳನ್ನು ಒಂದುಗೂಡಿಸಿದೆ. ಎಲ್ಲರೂ ಜತೆಯಾಗಿ ಹೋರಾಡುವಂತಹ ಸ್ಫೂರ್ತಿ ತುಂಬಿದೆ. ಈ ವೈರಾಣು ಅಪಾಯಕಾರಿ ಎಂಬುದರಲ್ಲಿ ಅನುಮಾನ ಇಲ್ಲ. ಇದು ಬಹಳಷ್ಟು ಜನರನ್ನು ಕೊಂದಿದೆ. ಆದರೆ, ನಾವು ಒಳ್ಳೆಯ ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.