ಲಖನೌ: ಉತ್ತರಪ್ರದೇಶ ಪೊಲೀಸರು ಜನರಲ್ಲಿ ಸಂಚಾರ ನಿಯಮದ ಕುರಿತು ಜಾಗೃತಿ ಮೂಡಿಸುವ ಕಾರಣಕ್ಕಾಗಿ ಯೋಗ ದಿನದದಂದು ಯೋಗಾಸನಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
ಈ ರೀತಿಯ ಟ್ವೀಟ್‌ವೊಂದರಲ್ಲಿ , ಪೊಲೀಸರು ಯೋಗಾಸನಗಳು ಹಾಗೂ ಸಂಚಾರ ನಿಯಮಗಳನ್ನು ಸೂಚಿಸುವ ಚಿತ್ರಗಳನ್ನು ಲಗತ್ತಿಸಿದ್ದು, ‘ವಾಹನದಲ್ಲಿ ಅನುಶ್ ಆಸನ (ಅನುಶಾಸನ)’ (ವಾಹನ ಚಾಲನೆ ಮಾಡುವಾಗ ಇರಬೇಕಾದ ಶಿಸ್ತು) ಕುರಿತು ಒತ್ತಿ ಹೇಳಿದ್ದಾರೆ.
ಕೆಂಪು ದೀಪದ ಸಿಗ್ನಲ್ ಬಿದ್ದಾಗ, ರೈಲು ಹಳಿಗಳ ಬಳಿ, ಹಾರ್ನ್ ನಿರ್ಬಂಧಿತ ಪ್ರದೇಶಗಳಲ್ಲಿ ಹಾಗೂ ಜೀಬ್ರಾ ಪಟ್ಟಿ ಇರುವಡೆಗಳಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದರ ಕುರಿತು ಟ್ವೀಟ್ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.
ಸಿಗ್ನಲ್‌ಗಳ ಕುರಿತ ಟ್ವೀಟ್‌ವೊಂದರಲ್ಲಿ, ಕೆಂಪು ದೀಪ ಬಂದಾಗ ನಿಧಾನವಾಗಿ ಉಸಿರಾಡಿ, ಹಳದಿ ದೀಪ ಬಂದಾಗ ಉಸಿರುನ್ನು ಬಿಗಿ ಹಿಡಿಯಿರಿ ಹಾಗೂ ಹಸಿರು ದೀಪ ಬಂದಾಗ ಉಸಿರು ಬಿಡಿ ಎಂದು ಆಕರ್ಷಕವಾಗಿ ತಿಳಿಸಲಾಗಿದೆ.
ಮತ್ತೊಂದು ಟ್ವೀಟ್‌ನಲ್ಲಿ, ನಿರ್ಲಕ್ಷ್ಯದ ವಾಹನ ಚಲಾವಣೆನ್ನು ಶೀರ್ಷಾಸನಕ್ಕೆ ಹಾಗೂ ಅದರಿಂದ ಸಂಭವಿಸಬಹುದಾದ ಸಾವನ್ನು ಶವಾಸನಕ್ಕೆ ಹೋಲಿಸಲಾಗಿದೆ.
ಈ ಕುರಿತು ವಿಶೇಷ ಡಿ.ಜಿ (ಕಾನೂನು ಮತ್ತು ಸುವ್ಯಸ್ಥೆ) ಪ್ರಶಾಂತ್ ಕುಮಾರ್ ಅವರು, ‘ಉತ್ತರಪ್ರದೇಶ ಪೊಲೀಸರು ಸರಣಿ ಟ್ವೀಟ್ ಮೂಲಕ ಕೇವಲ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವುದು ಮಾತ್ರವಲ್ಲದೇ ಸಂಚಾರ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.