ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಜಾದ್ ಸಮಾಜ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದರು.
ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 'ನಾವು ಉತ್ತರ ಪ್ರದೇಶದಲ್ಲಿ ಪರ್ಯಾಯವಾಗಿ ನಿಲ್ಲುತ್ತೇವೆ (ಇತರೆ ರಾಜಕೀಯ ಪಕ್ಷಗಳಿಗೆ). ಶಾಸಕ ಮತ್ತು ಸಚಿವ ಸ್ಥಾನದ ಆಫರ್‌ಗಳನ್ನು ನಾನು ತಿರಸ್ಕರಿಸಿದ್ದೇನೆ' ಎಂದರು.
'ಸಮಾಜವಾದಿ ಪಕ್ಷವು ನಮಗೆ 100 ಸ್ಥಾನಗಳನ್ನು ನೀಡಿದರೂ ಅವರೊಂದಿಗೆ ಹೋಗುವುದಿಲ್ಲ. ಬಿಜೆಪಿಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆಯ ನಂತರ ಇತರೆ ಪಕ್ಷಗಳಿಗೆ ನಾವು ನೆರವಾಗಬಹುದು' ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಕಾಂಗ್ರೆಸ್ ಜೊತೆಗೆ ಮೈತ್ರಿಯ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಜಾದ್, 'ಕಾಂಗ್ರೆಸ್‌ನೊಂದಿಗೆ ಮೈತ್ರಿಗಾಗಿ ಮಾತುಕತೆ ನಡೆಯುತ್ತಿದೆ. ಸಂಜೆ ವೇಳೆಗೆ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ. ನಾನು ಮಾಯಾವತಿ ಅವರ ಪಕ್ಷದೊಂದಿಗೂ ಮೈತ್ರಿಗಾಗಿ ಪ್ರಯತ್ನಿಸಿದೆ, ಆದರೆ ಅವರಿಂದ ಯಾರೊಬ್ಬರೂ ಸಂಪರ್ಕಿಸಲಿಲ್ಲ' ಎಂದರು.
'ನಾನು ನನ್ನ ವೈಯಕ್ತಿಕ ಸಂತಸಗಳ ಬಗೆಗೆ ತಲೆ ಕೆಡಿಸಿಕೊಂಡವನಲ್ಲ. ಕಳೆದ ಐದು ವರ್ಷಗಳಲ್ಲಿ ನಾನು ಸಾಕಷ್ಟು ಕಳೆದುಕೊಂಡಿರುವೆ. ಹಾಥರಸ್, ಪ್ರಯಾಗ್‌ರಾಜ್ ಹಾಗೂ ಉನ್ನಾವೊದಲ್ಲಿ ನಡೆದಂತಹ ಘಟನೆಗಳನ್ನು ವಿರೋಧಿಸಿ ಜೈಲಿಗೆ ಹೋಗಿರುವೆ. ವಿರೋಧ ಪಕ್ಷಗಳನ್ನು ವಿಭಜಿಸುವ ಮೂಲಕ ಬಿಜೆಪಿ ಏನಾದರೂ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಎಲ್ಲರ ಸೋಲು ಆಗಲಿದೆ,' ಎಂದು ಅಭಿಪ್ರಾಯ ಪಟ್ಟರು.
ಭೀಮ್ ಆರ್ಮಿ ಕಾರ್ಯಕರ್ತರು ನಮ್ಮ ಬಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.