ADVERTISEMENT

ಉತ್ತರ ಪ್ರದೇಶ ಚುನಾವಣೆ: ‘ಮೃದು ಹಿಂದುತ್ವ’ದ ಮೊರೆ ಹೋಗಲು ಅಖಿಲೇಶ್‌ ನಿರ್ಧಾರ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:31 IST
Last Updated 4 ಜನವರಿ 2022, 19:31 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ‘ಎಸ್‌ಪಿ ಮುಸ್ಲಿಂ ಪರ’ ಎಂಬ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಲು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮುಂದಾಗಿದ್ದಾರೆ. ಅಖಿಲೇಶ್‌ ಅವರ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅಯೋಧ್ಯೆಯಲ್ಲಿ ‘ಕರಸೇವಕ’ರ ಮೇಲೆ ಗೋಲಿಬಾರ್‌ ನಡೆಸಲಾಗಿದೆ ಎಂದು ಎಸ್‌ಪಿಯ ವಿರುದ್ಧ ಬಿಜೆಪಿ ಸದಾ ಹೇಳುತ್ತಿರುತ್ತದೆ. ಬಿಜೆಪಿಗೆ ತಿರುಗೇಟು ನೀಡುವುದಕ್ಕಾಗಿಯೆ ಅಖಿಲೇಶ್‌ ಅವರು ‘ಮೃದು ಹಿಂದುತ್ವ’ದ ಮೊರೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರತಿ ರಾತ್ರಿಯೂ ಶ್ರೀಕೃಷ್ಣನು ಕನಸಿನಲ್ಲಿ ಬಂದು ‘ರಾಮ ರಾಜ್ಯ’ ಸ್ಥಾಪಿಸುವಂತೆ ಹೇಳುತ್ತಿದ್ದಾನೆ ಎಂದು ಅಖಿಲೇಶ್‌ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಯೋಧ್ಯೆಯ ತಾತ್ಕಾಲಿಕ ರಾಮ ಮಂದಿರಕ್ಕೆ ಅಖಿಲೇಶ್‌ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಎಸ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಮಂದಿರಕ್ಕೆ ಅಖಿಲೇಶ್‌ ಅವರು ಈವರೆಗೆ ಭೇಟಿ ನೀಡಿಲ್ಲ.ತಮ್ಮ ಪಕ್ಷವು ಅಧಿಕಾರದಲ್ಲಿ ಇದ್ದಿದ್ದರೆ ರಾಮ ಮಂದಿರ ನಿರ್ಮಾಣ ಯಾವಾಗಲೇ ಆಗುತ್ತಿತ್ತು ಎಂದು ಇತ್ತೀಚೆಗೆ ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಇತರ ಮುಖಂಡರು ಅಯೋಧ್ಯೆ ವಿಚಾರವನ್ನು ಮುಂದಿಟ್ಟುಕೊಂಡು ಅಖಿಲೇಶ್‌ ಅವರನ್ನು ಟೀಕಿಸುತ್ತಿದ್ದಾರೆ. ಅಖಿಲೇಶ್‌ ಅವರು ಅಯೋಧ್ಯೆಗೆ ಭೇಟಿ ನೀಡಿದರೆ ಈ ಟೀಕೆಯ ಹರಿತವನ್ನು ಮೊಂಡಾಗಿಸಬಹುದು. ಇದರೊಂದಿಗೆ ‘ಮುಸ್ಲಿಂ ಪರ’ ಎಂಬ ಟೀಕೆಯಿಂದಲೂ ತಪ್ಪಿಸಿಕೊಳ್ಳಬಹುದುಎಂಬುದು ಎಸ್‌ಪಿ ಮುಖಂಡರ ಅಭಿಪ್ರಾಯ. ಜತೆಗೆ, ಧರ್ಮದ ನೆಲೆಯಲ್ಲಿ ಜನರನ್ನು ಧ್ರುವೀಕರಿಸುವ ಬಿಜೆಪಿಯ ಪ್ರಯತ್ನವನ್ನು ನಿಷ್ಫಲಗೊಳಿಸಬಹುದು ಎಂಬ ಭಾವನೆಯೂ ಎಸ್‌ಪಿ ನಾಯಕರಲ್ಲಿ ಇದೆ.

ಮಣಿಪುರ ಚುನಾವಣೆ ಕುರಿತು ಆಯೋಗದ ಸಭೆ ಇಂದು:ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತಂತೆ ಚುನಾವಣಾ ಆಯೋಗವು ಉನ್ನತ ಅಧಿಕಾರಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಜತೆ ಬುಧವಾರ ವರ್ಚ್ಯುವಲ್ ಸಭೆ ನಡೆಸಲಿದೆ.

ವಿಧಾನಸಭಾ ಚುನಾವಣೆಗಳು ನಡೆಯಬೇಕಿರುವ ಐದು ರಾಜ್ಯಗಳ ಪೈಕಿ ಮಣಿಪುರವೂ ಒಂದಾಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡಗಳಲ್ಲಿ ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗ ಸಭೆ ನಡೆಸಿತ್ತು.

ಇದೇ ತಿಂಗಳಲ್ಲಿ ಐದೂ ರಾಜ್ಯಗಳ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.