ಲಖನೌ: ಈವರೆಗೂ ಭಗವಂತ ರಾಮನನ್ನು ಮುಂದಿಟ್ಟು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ರಾಜಕಾರಣಿಗಳು ಈಗ ಭಗವಂತ ಕೃಷ್ಣನ ಕಡೆಗೆ ಮುಖ ಮಾಡಿದ್ದಾರೆ.
ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಅವರ ಪಕ್ಷದ ಮುಖಂಡರು ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಭಗವಂತ ಕೃಷ್ಣನ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಶ್ರೀಕೃಷ್ಣನ ಆಶೀರ್ವಾದ ನಮ್ಮ ಮೇಲೆ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಭಗವಂತ ಕೃಷ್ಣನ ಪ್ರೇರಣೆ ಸಿಕ್ಕಿರುವುದಾಗಿ ಹೇಳಿಕೊಂಡಿರುವ ಬಿಜೆಪಿಯ ಸಂಸದ ಹರ್‌ನಾಥ್ ಸಿಂಗ್ ಯಾದವ್, ಮಥುರಾ ಕ್ಷೇತ್ರದ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಅವರ ಹೆಸರು ಘೋಷಿಸುವಂತೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಕೋರಿದ್ದಾರೆ. ಸ್ವತಃ ಭಗವಂತ ಕೃಷ್ಣನ ಪ್ರೇರಣೆಯಿಂದಲೇ ಪತ್ರ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ.
ನಡ್ಡಾ ಅವರಿಂದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಖಿಲೇಶ್ ಯಾದವ್ ಅವರು ತಮ್ಮ ಕನಸಿನಲ್ಲಿ ಭಗವಂತ ಕೃಷ್ಣ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 'ವಿಧಾನಸಭೆ ಚುನಾವಣೆ ನಂತರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸುವುದಾಗಿಯೂ, ನಂತರ 'ರಾಮ ರಾಜ್ಯ' ಸ್ಥಾಪನೆಯಾಗುವುದಾಗಿಯೂ ಪ್ರತಿ ರಾತ್ರಿಯೂ ಶ್ರೀಕೃಷ್ಣ ಕನಸಿನಲ್ಲಿ ಬಂದು ಹೇಳುತ್ತಿದ್ದಾರೆ' ಎಂದು ಬಿಜೆಪಿಯ ಕಾಲೆಳೆದಿದ್ದಾರೆ.
ಅಖಿಲೇಶ್ ಅವರ 'ಕನಸಿನ' ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳವಾರ ಪ್ರತಿಕ್ರಿಯಿಸಿದ್ದು, ಸಮಾಜವಾದಿ ಪಕ್ಷವು ಅಧಿಕಾರದಲ್ಲಿದ್ದಾಗ, ಜೈಲುಗಳಿಂದ ಉಗ್ರರನ್ನು ಬಿಡುಗಡೆ ಮಾಡಿರುವುದನ್ನು ಪ್ರಸ್ತಾಪಿಸಿ, 'ಭಗವಂತ ಕೃಷ್ಣನ ಶಾಪ ಅವರನ್ನು ಕಾಡುತ್ತಿರಬಹುದು (ಸಮಾಜವಾದಿ ಪಕ್ಷ)' ಎಂದಿದ್ದಾರೆ.
'ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಲು ಸಾಧ್ಯವಾಗದಿರುವುದನ್ನು ಬಿಜೆಪಿ ಸರ್ಕಾರವು ಸಾಧ್ಯ ಮಾಡಿದೆ ಎಂಬುದನ್ನು ಭಗವಾನ್ ಕೃಷ್ಣ ಅವರ ಕನಸಿನಲ್ಲಿ ಹೇಳಿದ್ದಾರೆ' ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಅಲಿಗಢದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜೂನ್ 2016ರಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಸ್ತಾಪಿಸಿದ ಆದಿತ್ಯನಾಥ್, 'ನಿಮಗೆ ಮಥುರಾದಲ್ಲಿ ಕೃಷ್ಣ–ಬಲದೇವರ ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ....ಆದರೆ, ಅವರು ಕಂಸರನ್ನು ಸೃಷ್ಟಿಸಿದರು (ಹಿಂದೂ ಪುರಾಣದ ಪ್ರಕಾರ, ಕೃಷ್ಣನ ಮಾವ ಕಂಸ, ಆತನ ತಂಗಿಯ ಆರು ಹೆಣ್ಣು ಮಕ್ಕಳ ಹತ್ಯೆ ಮಾಡಿದ್ದನು)' ಎಂದಿದ್ದಾರೆ. 2016ರ ಹಿಂಸಾಚಾರದಲ್ಲಿ ಪೊಲೀಸರು ಮತ್ತು ಜಾಗದ ಅತಿಕ್ರಮಣಕಾರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಹಾಗೂ 24 ಮಂದಿ ಮುಷ್ಕರ ನಿರತರು ಸಾವಿಗೀಡಾಗಿದ್ದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಭಗವಂತ ರಾಮ, ರಾಮ ಮಂದಿರ ಹಾಗೂ ಅಯೋಧ್ಯೆಯ ವಿಷಯಗಳು ಬಹುತೇಕ ಎಲ್ಲ ರಾಜಕಾರಣಿಗಳ ಭಾಷಣಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಈಗ 'ಕೃಷ್ಣ' ಕೇಂದ್ರಿತವಾಗಿ ಹೇಳಿಕೆ, ಪ್ರತಿ ಹೇಳಿಕೆಗಳು ವ್ಯಕ್ತವಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.