ADVERTISEMENT

ಪೊಲೀಸರ ಲಾಠಿಯೇಟು: ಗಲಭೆಕೋರರಿಗೆ 'ರಿಟರ್ನ್‌ ಗಿಫ್ಟ್‌' ಎಂದ ಬಿಜೆಪಿ ಶಾಸಕ

ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 13:51 IST
Last Updated 12 ಜೂನ್ 2022, 13:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಪ್ರವಾದಿ ಮಹಮ್ಮದ್ ಕುರಿತಾಗಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಕೆಲವು ಪ್ರತಿಭಟನಕಾರರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದು ಥಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಈ ಥಳಿತವು ಪ್ರತಿಭಟನೆಗೆ ಪ್ರತಿಯಾಗಿ ಗಲಭೆಕೋರರಿಗೆ ಸಿಕ್ಕ ಉಡುಗೊರೆಯಾಗಿದೆ ಎಂದು ಉತ್ತರಪ್ರದೇಶದ ಶಾಸಕ ಶಲಭ್ ತ್ರಿಪಾಠಿ ಹೇಳಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಶಹರಾನ್‌ಪುರ ಪೊಲೀಸ್‌ ಠಾಣೆಯಲ್ಲಿ ಚಿತ್ರೀಕರಿಸಿದ ವಿಡಿಯೊ ಎನ್ನಲಾಗಿದ್ದು, ಒಂಬತ್ತು ಮಂದಿ ಪೊಲೀಸರ ಲಾಠಿ ಏಟುಗಳನ್ನು ತಾಳಲಾರದೆ ಕಿರುಚಾಡುತ್ತಿರುವುದು ಇದೆ. ಇವರು ಪ್ರವಾದಿ ಮಹಮ್ಮದ್‌ ವಿರುದ್ಧದ ಅಪಮಾನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿ ಪ್ರತಿಭಟನಕಾರರನ್ನು ಪೊಲೀಸರು ಥಳಿಸುತ್ತಿರುವಂತಿರುವ ವಿಡಿಯೊವನ್ನು ಪೋಸ್ಟ್ ಮಾಡಿರುವ ಶಲಭ್ ತ್ರಿಪಾಠಿ, ‘ಇದು ಗಲಭೆಕೋರರಿಗೆ ಸಿಕ್ಕ ಉಡುಗೊರೆ’ ಎಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.

ADVERTISEMENT

ಸಮಾಜವಾದಿ ಪಕ್ಷ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಇಂಥ ಘಟನೆಗಳನ್ನು ಪ್ರಶ್ನಿಸಲೇಬೇಕು. ಇಲ್ಲದಿದ್ದರೆ, ನ್ಯಾಯವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಲಿದೆ. ಉತ್ತರಪ್ರದೇಶದಲ್ಲಿ ಹಲವು ಲಾಕಪ್ ಡೆತ್, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರ ಹಕ್ಕುಗಳನ್ನು ದಮನ ಮಾಡಿದ ಘಟನೆಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೊ ಕುರಿತು, 'ಇಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ. ಈ ಘಟನೆ ನಿಜವಾಗಿದ್ದೇ ಆದಲ್ಲಿ ಹಲ್ಲೆ ನಡೆಸುತ್ತಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು. ವಿಡಿಯೊವನ್ನು ಪರಿಶೀಲಿಸುತ್ತಿದ್ದೇವೆ. ಇದೊಂದು ಗಂಭೀರ ವಿಷಯವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರಶಾಂತ್‌ ಕುಮಾರ್‌ 'ಎನ್‌ಡಿಟಿವಿ'ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರವಾದಿ ಮಹಮ್ಮದ್ ಕುರಿತ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ರಾಜ್ಯದಾದ್ಯಂತ 300ಕ್ಕೂ ಹೆಚ್ಚು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ,ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ, ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಜಂಗಿಗಂಜ್ ಪಟ್ಟಣದಲ್ಲಿ ಭಾರಿ ಮೆರವಣಿಗೆ ನಡೆಸಲಾಯಿತು. ಪ್ರವಾದಿ ಮಹಮ್ಮದ್ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಅವರು ಸಮರ್ಥಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.