ADVERTISEMENT

ಆಗ್ರಾದ ಮಣಪ್ಪುರಂ ಫೈನಾನ್ಸ್‌ನಿಂದ 15 ಕೆ.ಜಿ ಚಿನ್ನ ದರೋಡೆ; ಇಬ್ಬರು ಸಾವು

ಪಿಟಿಐ
Published 18 ಜುಲೈ 2021, 5:09 IST
Last Updated 18 ಜುಲೈ 2021, 5:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಗ್ರಾ: ಉತ್ತರ ಪ್ರದೇಶದ ಕಮಲಾ ನಗರದಲ್ಲಿರುವ ಮಣಪ್ಪುರಂ ಫೈನಾನ್ಸ್‌ ಶಾಖೆಯಿಂದ ಶಸ್ತ್ರಸಜ್ಜಿತ ಆರು ಮಂದಿ ದರೋಡೆಕೋರರು ಸುಮಾರು 15 ಕೆ.ಜಿ ಚಿನ್ನ ಮತ್ತು ಐದು ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ದರೋಡೆಕೋರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ.

ಎರಡು ಗಂಟೆ ಹೊತ್ತಿಗೆ ಮಣಪ್ಪುರಂ ಫೈನಾನ್ಸ್‌ ಕಚೇರಿಗೆ ನುಗ್ಗಿದ ಆರು ಮಂದಿ ಶಸ್ತ್ರಾಸ್ತ್ರಧಾರಿಗಳು ಅಲ್ಲಿದ್ದ ಸಿಬ್ಬಂದಿಗೆ ಬೆದರಿಕೆ ಹಾಕಿ 15 ಕೆ.ಜಿ ಚಿನ್ನ ದೋಚಿದ್ದಾರೆ. ಅವರೆಲ್ಲರೂ ಮುಖವಾಡ ಧರಿಸಿದ್ದರು.

ಬಳಿಕ ನಡೆದ ಸಿನಿಮೀಯ ಕಾರ್ಯಾಚರಣೆಯಲ್ಲಿ ದರೋಡೆಗೆ ಯತ್ನಿಸಿದ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರನ್ನು ಫಿರೋಜಾಬಾದ್ ನಿವಾಸಿಗಳಾದ ಮನೀಷ್ ಪಾಂಡೆ ಮತ್ತು ನಿರ್ದೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಅವರಿಂದ ಪೊಲೀಸರು 7.5 ಕೆ.ಜಿ ಚಿನ್ನ ಹಾಗೂ 1.5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ರಾ ಐಜಿ ನವೀನ್ ಅರೋರಾ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪೊಲೀಸರು ತನಿಖೆಯನ್ನು ನಡೆಸಿದರು. ಆರೋಪಿಗಳು ಖಂಡೋಲಿ-ಎಟ್ಮಾಡಪುರದಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ ಅಡಗಿದ್ದಾರೆಂಬ ಮಾಹಿತಿ ದೊರಕಿತು. ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿಗಳು ಗುಂಡು ಹಾರಿಸಿದರು. ಪೊಲೀಸರು ನಡೆಸಿದ ಪ್ರತಿ ದಾಳಿಯ ವೇಳೆ ಆರೋಪಿಗಳಾದ ಮನೀಷ್ ಹಾಗೂ ನಿರ್ದೋಷ್ ಗಂಭೀರವಾಗಿ ಗಾಯಗೊಂಡರು. ಅವರನ್ನು ಖಂಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಸಾಗಿಸಿದರೂ ಅಷ್ಟರ ವೇಳೆಗೆ ಸಾವಿಗೀಡಾದರು ಎಂದು ಮಾಹಿತಿ ನೀಡಿದ್ದಾರೆ.

ಇತರೆ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಲೂಟಿ ಪ್ರಕರಣ ಸಂಬಂಧ ತಕ್ಷಣ ಕಾರ್ಯ ಪ್ರವೃತರಾಗಿ ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡಕ್ಕೆ ಎಡಿಜಿ (ಆಗ್ರಾ ವಲಯ) ರಾಜೀವ್ ಕೃಷ್ಣ ಅವರು ಒಂದು ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.