ADVERTISEMENT

ತಾಯಿ ಜೊತೆ ಮಾತುಕತೆ: ಕಪ್ಪಣ್‌ ಅರ್ಜಿ ಪರಿಗಣನೆಗೆ

ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ ಉತ್ತರ ಪ್ರದೇಶ ಸರ್ಕಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 16:56 IST
Last Updated 22 ಜನವರಿ 2021, 16:56 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಬಂಧನಕ್ಕೆ ಒಳಗಾಗಿರುವ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪಣ್‌ ಹಾಗೂ ಅವರ ತಾಯಿಯ ನಡುವೆ ವಿಡಿಯೊ ಕಾನ್ಫರೆನ್ಸ್‌ಗೆ ಸಾಧ್ಯತೆಗಳನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರವು ಶುಕ್ರವಾರ ಭರವಸೆ ನೀಡಿದೆ.

ಕಳೆದ ವರ್ಷ ಹಾಥರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ವರದಿಗೆ ತೆರಳುತ್ತಿದ್ದ ಸಿದ್ದಿಕಿ ಸೇರಿ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಅ.5ರಂದು ಬಂಧಿಸಿದ್ದರು. ಇವರಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಜೊತೆ ಸಂಪರ್ಕವಿದೆ ಎನ್ನುವ ಆರೋಪದಡಿ, ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಕಠಿಣ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯುಜೆ) ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಸಿದ್ದಿಕಿ ಅವರ ತಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ತನ್ನ ಮಗನೊಂದಿಗೆ ಮಾತನಾಡಬೇಕು ಎಂದು ಪ್ರಜ್ಞೆತಪ್ಪುವ ಮೊದಲು ತನ್ನ ಆಸೆಯನ್ನು ಹೇಳಿಕೊಂಡಿದ್ದರು. ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ತನ್ನ ಮಗನ ಜೊತೆಗೆ ಮಾತನಾಡಲು ತಾಯಿಗೆ ಅವಕಾಶ ನೀಡಿ. ಅವರು ಬದುಕಿರುವಾಗಲೇ ಮಗನ ಜೊತೆಗೆ ಮಾತನಾಡಲಿ. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಇದನ್ನು ಪರಿಗಣಿಸಿ’ ಎಂದು ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿದ್ದ ಪೀಠದ ಮುಂದೆ ವಾದಿಸಿದರು.

ADVERTISEMENT

‘ನ್ಯಾಯಾಲಯವು ವಿಡಿಯೊ ಕಾನ್ಫರೆನ್ಸಿಂಗ್‌ಗೆ ಅವಕಾಶವನ್ನು ನೀಡುತ್ತದೆ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರೂ ಇದ್ದ ಪೀಠವು ಉಲ್ಲೇಖಿಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ, ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಈ ವಿಷಯವನ್ನು ಆಯಾ ಪ್ರಾಧಿಕಾರಗಳಿಗೆ ಬಿಡಬೇಕು, ಅವರು ವಿಡಿಯೊ ಕಾನ್ಫರೆನ್ಸಿಂಗ್‌ ಸಾಧ್ಯತೆಗಳನ್ನು ಪರಿಶೀಲಿಸಲಿದ್ದಾರೆ’ ಎಂದರು.

ಸಿದ್ದಿಕಿ ಅವರ ಬಂಧನವನ್ನು ಪ್ರಶ್ನಿಸಿ ಕೆಯುಡಬ್ಲ್ಯುಜೆ ಸಲ್ಲಿಸಿರುವ ಅರ್ಜಿಯನ್ನು ಆರು ವಾರಗಳ ನಂತರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಕ್ಕೆ ನ್ಯಾಯಾಲಯವು ದಿನಾಂಕ ನಿಗದಿಪಡಿಸಿದೆ. ಸಿದ್ದಿಕಿ, ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದು, ಈ ಸಂಘಟನೆಯು ನಿಷೇಧಿತ ‘ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ’(ಸಿಮಿ)ದ ಪುನರವತಾರ ಎಂದು ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದ ಉತ್ತರ ಪ್ರದೇಶ ಸರ್ಕಾರವು, ಸಿದ್ದಿಕಿ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.