ಲಖನೌ: ಮಸೀದಿಯಲ್ಲಿ ‘ಆಝಾನ್’ಗೆ ಧ್ವನಿವರ್ಧಕ ಬಳಸುತ್ತಿರುವುದರಿಂದ ‘ಶಬ್ದ ಮಾಲಿನ್ಯ’ ಆಗುತ್ತಿದ್ದು, ನಿದ್ರೆಗೆ ಭಂಗವಾಗುತ್ತಿದೆ ಎಂದು ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಂಗೀತಾ ಶ್ರೀವಾಸ್ತವ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
‘ನಾನು ಯಾವುದೇ ಧರ್ಮದ ವಿರುದ್ಧ ಇಲ್ಲ. ಆದರೆ ಧಾರ್ಮಿಕ ಆಚರಣೆಗಳು ಬೇರೆಯವರಿಗೆ ತೊಂದರೆಗಳನ್ನು ಕೊಡುವಂತಿರಬಾರದು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ನಿತ್ಯ ಬೆಳಿಗ್ಗೆ 5.30 ಗಂಟೆಗೆ ಸಮೀಪದ ಮಸೀದಿಯಲ್ಲಿ ಮೌಲ್ಪಿಯು ಮೈಕ್‌ನಲ್ಲಿ ಜೋರಾಗಿ ಆಝಾನ್ ಮಾಡುವುದರಿಂದ ನನ್ನ ನಿದ್ರೆಗೆ ಧಕ್ಕೆಯಾಗುತ್ತಿದೆ. ಅಲ್ಲದೆ ಈದ್‌ಗೂ ಮುಂಚೆಯೇ ಅವರು ‘ಸೆಹೇರಿ’ಯನ್ನು ಬೆಳಿಗ್ಗೆ 4 ಗಂಟೆಗೆ ಘೋಷಿಸುತ್ತಾರೆ. ಆಗೆಲ್ಲ ನಿದ್ರೆ ಭಂಗವಾಗುತ್ತದೆ. ಮತ್ತೆ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುವುದಿಲ್ಲ. ಇದರಿಂದ ಇಡೀ ದಿನ ತಲೆನೋವು ಆವರಿಸುತ್ತದೆ’ ಎಂದು ಹೇಳಿದ್ದಾರೆ.
‘ಮೈಕ್ ಬಳಸದೆಯೇ ಆಝಾನ್ ಮಾಡಬಹುದಲ್ಲ’ ಎಂದಿರುವ ಅವರು, ಧ್ವನಿ ಮಟ್ಟ ಎಷ್ಟಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನೂ ಉಲ್ಲೇಖಿಸಿದ್ದಾರೆ.
ಮೂಲಗಳ ಪ್ರಕಾರ, ಧ್ವನಿಯ ಮಟ್ಟವನ್ನು ಮಿತಿಯಲ್ಲೇ ಇರಿಸುವಂತೆ ಪೊಲೀಸರು ಮಸೀದಿ ಮೇಲ್ವಿಚಾರಕರಿಗೆ ಸೂಚಿಸಿದ್ದಾರೆ. ಅಲ್ಲದೆ ಕುಲಪತಿ ಮನೆ ಕಡೆ ಬರುವ ಮಸೀದಿಯ ಮೈಕ್‌ಗಳನ್ನು ಬಂದ್ ಮಾಡಿಸಿರುವುದಾಗಿ ಮೂಲಗಳು ತಿಳಿಸಿವೆ. ಕುಲಪತಿ ಪತ್ರಕ್ಕೆ ಮುಸ್ಲಿಂ ಧರ್ಮಗುರುಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ದೇವಾಲಯಗಳಲ್ಲಿ ಭಜನೆ, ಕೀರ್ತನೆ, ಆರತಿ ಸಂದರ್ಭದಲ್ಲಿನ ಶಬ್ದ ಮಾಲಿನ್ಯದ ಬಗ್ಗೆ ಅವರು ಧ್ವನಿಯೆತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.