ಲಖನೌ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಕೇಳಿದ್ದಕ್ಕೆ ಕುಪಿತಗೊಂಡು ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಪತ್ನಿ, ಪೊಲೀಸರ ಸಮ್ಮುಖದಲ್ಲೇ ಮಿದುಳು ತೆಗೆಯಲು ಮುಂದಾದ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಆ. 9ರಂದು ನಡೆದಿದೆ.
ಸತ್ಯಪಾಲ್ (42) ಎಂಬುವವರೇ ಮೃತ ವ್ಯಕ್ತಿ. ಮಾಂಸಾಹಾರ ಪ್ರಿಯರಾಗಿದ್ದ ಇವರು ಅದನ್ನೇ ಬಡಿಸುವಂತೆ ಪತ್ನಿಗೆ ಒತ್ತಡ ಹೇರಿದ್ದರು. ಶ್ರಾವಣ ಮಾಸವಾದ್ದರಿಂದ ಮಾಂಸಾಹಾರ ಅಡುಗೆ ತಯಾರಿಸಲು ಪತ್ನಿ ನಿರಾಕರಿಸಿದ್ದರು. ಇವರು ವಿವಾಹವಾಗಿ 20 ವರ್ಷಗಳಾಗಿವೆ.
ಪಾನಮತ್ತನಾಗಿದ್ದ ಸತ್ಯಪಾಲ್, ಮಾಂಸಾಹಾರ ನೀಡದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ವ್ಯಗ್ರಳಾದ ಪತ್ನಿ, ಇಟ್ಟಿಗೆಯಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ನಿರಂತರವಾಗಿ ತಲೆಗೆ ಹೊಡೆದಿದ್ದರಿಂದ ಸತ್ಯಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರ ಪುತ್ರನ ಹೇಳಿಕೆ ಆಧರಿಸಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
‘ಪತಿಯ ಸಾವಿನ ನಂತರ ಮಹಿಳೆಯು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಸಮ್ಮುಖದಲ್ಲೇ ಪತಿಯ ಒಡೆದ ತಲೆಯೊಳಗೆ ಕೈಹಾಕಿ ಮಿದುಳು ತೆಗೆಯಲು ಮುಂದಾಗಿದ್ದರು. ಹೀಗಾಗಿ ಆಕೆಯ ಮಾನಸಿಕ ಆರೋಗ್ಯದ ಸ್ಥಿತಿ ಕುರಿತು ವೈದ್ಯರ ಸಲಹೆ ಪಡೆಯಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.