ಆಗ್ರಾ: ‘ತನ್ನ ಪತಿ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ ಎಂದು ಆರೋಪಿಸಿ ಮದುವೆಯಾದ 40 ದಿನಗಳಲ್ಲಿಯೇ ಮಹಿಳೆಯೊಬ್ಬರು ವಿಚ್ಛೇದನ ಕೋರಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
'ತನ್ನ ಪತಿ ತಿಂಗಳಿಗೆ 2ರಿಂದ 3 ಬಾರಿ ಸ್ನಾನ ಮಾಡುತ್ತಾರೆ. ಇದರಿಂದ ಆತನ ದೇಹದಿಂದ ಕೆಟ್ಟ ವಾಸನೆ ಬರುತ್ತದೆ. ಸ್ವಚ್ಛತೆ ಇಲ್ಲದಿರುವ ಇಂತಹ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ' ಎಂದು ಮಹಿಳೆ ದೂರಿರುವುದಾಗಿ ವರದಿಯಾಗಿದೆ.
ಈ ಆರೋಪ ಸಂಬಂಧ ಪತಿಯು ಪ್ರತಿಕ್ರಿಯಿಸಿದ್ದು, ಆಕೆ ಹೇಳುತ್ತಿರುವುದು ನಿಜ. ಆದರೆ ಮದುವೆಯಾದ ಬಳಿಕ 40 ದಿನಗಳಲ್ಲಿ 6 ಬಾರಿ ಸ್ನಾನ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ಮಹಿಳೆಯು ಮೊದಲು ಕೌಟುಂಬಿಕ ಸಲಹಾ ಕೇಂದ್ರವನ್ನು ಸಂಪರ್ಕಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿ ವಿಚ್ಛೇದನ ಕೋರಿದ್ದಾರೆ ಎನ್ನಲಾಗಿದೆ.
ಪೊಲೀಸರು ಈ ಸಂಬಂಧ ದಂಪತಿಗಳೊಂದಿಗೆ ಚರ್ಚಿಸಿದ್ದಾರೆ. ಈ ವೇಳೆ ಸ್ನಾನದ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಮಹಿಳೆಯ ಪತಿಯೊಂದಿಗೆ ಮಾತನಾಡಿ ಪ್ರತಿ ನಿತ್ಯ ಸ್ನಾನ ಮಾಡಿಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ ಮಹಿಳೆ ತನ್ನ ಪತಿಯೊಂದಿಗೆ ಇರಲು ಇಷ್ಟಪಡಲಿಲ್ಲ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ದಂಪತಿಗೆ ಸೆಪ್ಟೆಂಬರ್ 22ರಂದು ಕೌನ್ಸೆಲಿಂಗ್ ಕೇಂದ್ರಕ್ಕೆ ತೆರಳುವಂತೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.