ಗೊಂಡಾ: ಅನಾರೋಗ್ಯದಿಂದ ಬಳಲುತ್ತಿದ್ದ ಸೋದರನಿಗೆ ಮೂತ್ರಪಿಂಡ ನೀಡಲು ಮುಂದಾದ ಪತ್ನಿ, ಹಣದ ಬೇಡಿಕೆ ಒಡ್ಡಲು ನಿರಾಕರಿಸಿದ್ದರಿಂದ, ವಾಟ್ಸ್‌ಆ್ಯಪ್ ಮೂಲಕವೇ ಪತಿ ತಲಾಕ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಗೊಂಡಾದ ಧಾನೆಪೂರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಲಾಕ್ ನೀಡಿದ ಪತಿ ಮೊಹಮ್ಮದ್ ರಶೀದ್ ವಿರುದ್ಧ ತರನುಮ್ (42) ಪ್ರಕರಣ ದಾಖಲಿಸಿದ್ದಾರೆ.
ತರನುಮ್ ಹಾಗೂ ರಶೀದ್ 25 ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಮದುವೆಯಾಗಿ ಐದು ವರ್ಷಗಳವರೆಗೂ ಮಕ್ಕಳಾಗದ ಕಾರಣ ಎರಡನೇ ಮದುವೆಗೆ ರಶೀದ್ ಅವಕಾಶ ಪಡೆದಿದ್ದರು. ಈ ನಡುವೆ ನೌಕರಿ ಅರಸಿ ಸೌದಿ ಅರೇಬಿಯಾಗೆ ರಶೀದ್ ಹೋಗಿದ್ದರು.
ತರನುಮ್ ಸೋದರ ಮುಂಬೈನಲ್ಲಿರುವ ಮೊಹಮ್ಮದ್ ಶಾಖೀರ್ ಅವರಿಗೆ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿತು. ಮೂತ್ರಪಿಂಡ ಕಸಿಗೆ ವೈದ್ಯರು ಶಿಫಾರಸು ಮಾಡಿದ್ದರು. ತನ್ನ ಒಂದು ಮೂತ್ರಪಿಂಡವನ್ನು ಸೋದರನಿಗೆ ನೀಡುವ ಕುರಿತು ತರನುಮ್ ಪತಿಯೊಂದಿಗೆ ಚರ್ಚಿಸಿದ್ದರು. ಆದರೆ ಇದಕ್ಕೆ ₹40 ಲಕ್ಷ ಪಡೆಯುವಂತೆ ರಶೀದ್ ಒತ್ತಾಯಿಸಿದ್ದರು. ಆದರೆ ಅದನ್ನು ನಿರಾಕರಿಸಿದ ಮರು ಕ್ಷಣವೇ ವಾಟ್ಸ್‌ಆ್ಯಪ್ ಮೂಲಕ ತ್ರಿವಳಿ ತಲಾಕ್ ಘೋಷಿಸಿದ್ದಾನೆ ಎಂದು ತರನುಮ್ ದೂರಿನಲ್ಲಿ ಹೇಳಿದ್ದಾರೆ.
ಈ ವಿಷಯವನ್ನು ತನ್ನ ಅತ್ತೆ ಮಾವನಿಗೆ ತರನುಮ್ ತಿಳಿಸಿದ್ದಾರೆ. ಅವರೂ ಮನೆ ಬಿಟ್ಟು ಹೋಗುವಂತೆ ಸೂಚಿಸಿದ್ದಾರೆ. ಹೀಗಾಗಿ ತನ್ನ ಪಾಲಕರೊಂದಿಗೆ ಇರುವುದಾಗಿ ತರನುಮ್ ಹೇಳಿದ್ದಾರೆ.
ಮಹಿಳೆಗೆ ಹಿಂಸೆ ನೀಡಿದ ಪ್ರಕರಣದಡಿ ಪತಿ ಹಾಗೂ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಮುಸ್ಲಿಂ ಮಹಿಳೆ (ವಿವಾಹ ಸಂಬಂಧಿತ ಹಕ್ಕುಗಳ ರಕ್ಷಣೆ) ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ರಶೀದ್ ದೇಶಕ್ಕೆ ಮರಳಿದ ನಂತರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.