ADVERTISEMENT

ರೈತರ ರಾಷ್ಟ್ರೀಯ ನೀತಿಗೆ ಯುಪಿಎ ಸರ್ಕಾರ ಕಾರ್ಯನಿರ್ವಹಿಸಿಲ್ಲ: ಸ್ವಾಮಿನಾಥನ್‌

‘ರೈತರು ಪ್ರತಿಭಟನೆಯಿಂದ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 14:57 IST
Last Updated 30 ನವೆಂಬರ್ 2018, 14:57 IST
ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್
ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್   

ನವದೆಹಲಿ, ಚೆನ್ನೈ:ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ ಪ್ರೊ.ಎಂ.ಎಸ್‌.ಸ್ವಾಮಿನಾಥನ್‌ ಅವರು ದೆಹಲಿಯಲ್ಲಿ ರೈತರು ನಡೆಸುತ್ತಿರುವ ‘ಕಿಸಾನ್ ಮುಕ್ತಿ ಮೋರ್ಚಾ’ ಪ್ರತಿಭಟನೆಗೆ ಬೆಂಬಲ ನೀಡಿ ಶುಕ್ರವಾರ ಮಾತನಾಡಿದ್ದು, ‘ರೈತರು ತಮ್ಮ ಸಮಸ್ಯೆಗಳನ್ನು ಆಂದೋಲನ ಮತ್ತು ತಾರ್ಕಿಕತೆಯೇಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ’ ಎಂದು ಹೇಳಿದ್ದಾರೆ.

ಕೃಷಿಕ, ವಿಜ್ಞಾನಿಯಾಗಿರುವ ಸ್ವಾಮಿನಾಥನ್‌ ಅವರನ್ನು ರೈತರ ಉತ್ಪನ್ನಗಳು ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ ಸಲಹೆ ನೀಡಲು ನೇಮಿಸಲಾಗಿತ್ತು. ಅದರಂತೆ ಅವರು ವರದಿಯನ್ನೂ ಸರ್ಕಾರಕ್ಕೆ ನೀಡಿದ್ದರು.

2004 ಮತ್ತು 2006ರ ನಡುವೆ ನಡೆಸಲಾದ ಸಂಶೋಧನೆಯ ಅಂತಿಮ ವರದಿಯನ್ನೇ ‘ರೈತರ ರಾಷ್ಟ್ರೀಯ ನೀತಿ’(ಎನ್‌ಸಿಎಫ್‌) ಅಥವಾ ಸ್ವಾಮಿನಾಥನ್‌ ಕಮಿಷನ್‌ ವರದಿ ಎಂದು ಕರೆಯಲಾಯಿತು.

ADVERTISEMENT

ಕೃಷಿಕರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲು 50 ಸಾವಿಕ್ಕೂ ಹೆಚ್ಚು ರೈತರು ದೆಹಲಿಯಲ್ಲಿ ಸೇರಿದ್ದಾರೆ. ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಖಿಲ ಭಾರತ ಕಿಸಾನ್‌ ಸಂರ್ಘರ್ಷ ಸಮನ್ವಯ ಸಮಿತಿ(ಎಐಕೆಎಸ್‌ಸಿಸಿ) ನೇತೃತ್ವದಲ್ಲಿ ರಾಷ್ಟ್ರೀಯ ಕೃಷಿ ನೀತಿ ರಚನೆಗೆ ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದಾರೆ.

ಕಳೆದೊಂದು ದಶಕದಿಂದ ಕೃಷಿ ಬಿಕ್ಕಟ್ಟು ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದಿರುವ ಸ್ವಾಮಿನಾಥನ್‌, ಸಾಲಮನ್ನಾ ಬೇಡಿಕೆ ಮುಂದಿಡುತ್ತಿರುವ ರೈತರಿಗೆ ಕೈಗಾರಿಕೋದ್ಯಮಿಗಳಿಗೆ ನೀಡುವಂತೆ ಆರ್ಥಿಕ ಕಾರ್ಯಸಾಧ್ಯತೆಯ ಯೋಜನೆಗಳು ಅತಿ ಮುಖ್ಯ ಎಂದು ಹೇಳಿದ್ದಾರೆ.

ಎಂಎಸ್‌ಪಿ ಜಾರಿಗೊಳಿಸಬೇಕು. ಇದು ರೈತರಿಗೆ ಕಾರ್ಯಸಾಧ್ಯತೆಗಳನ್ನು ನೀಡಿ ಆಕರ್ಷಿಸುತ್ತದೆ ಎಂದಿದ್ದಾರೆ.

ಸಾಲಮನ್ನಾದಿಂದ ರೈತರುಸಂಪೂರ್ಣ ಮುಕ್ತರಾಗಲಾರರು. ಮತ್ತೊಂದು ಸಾಲ ಮಾಡುತ್ತಾರೆ. ಆದರೆ, ಬದಲಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೆಲಸಗಳಾಗಬೇಕು. ‘ಚುನಾವಣಾ ರಾಜಕಾರಣ’ ನೀಡುವ ಸಾಲಮನ್ನಾ ಎಂಬುದು ಕೇವಲ ಸೀಮಿತ ಪ್ರಮಾಣದವರೆಗೆ ಮಾತ್ರವೇ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರುವ ಅವರು, ಇದರ ಬದಲಿಗೆ ಸೂಕ್ತ ಬೆಲೆ ಕಲ್ಪಿಸುವ ವ್ಯವಸ್ಥೆಗಳಾಗಬೇಕು ಎಂದಿದ್ದಾರೆ.

‘ರೈತರಿಗೆ ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಯುಪಿಎ ಸರ್ಕಾರ ಕಾರ್ಯನಿರ್ವಹಿಸಿಲ್ಲ’
ರೈತರ, ಕೃಷಿ ಆರ್ಥಿಕ ಕಾರ್ಯಸಾಧ್ಯತೆಗಳನ್ನು ಸುಧಾರಿಸುವ ಕುರಿತು ನೀಡಿರುವ ವರದಿ ಅನ್ವಯ 2007ರಲ್ಲಿ ರೈತರಿಗಾಗಿ ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಯುಪಿಎ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಸ್ವಾಮಿನಾಥ್ ಶುಕ್ರವಾರ ಚೆನ್ನೈನಲ್ಲಿ ಹೇಳಿದ್ದಾರೆ.

ಆವರದಿಯು ಕೃಷಿ ಆರ್ಥಿಕ ಸಾಧ್ಯತೆಗಳನ್ನು ಸುಧಾರಿಸಲು ಪ್ರಯತ್ನಿಸುತ್ತದೆ ಎಂದಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಬೆಲೆ ನೀಡಬೇಕು, ಉತ್ಪನ್ನಗಳ ಶೇಖರಣೆ ಮತ್ತು ಸಾರ್ವಜನಿಕ ವಿತರಣೆಗೆ ಗಮನ ನೀಡಬೇಕು ಎಂದಿದ್ದಾರೆ.

‘ಚುನಾವಣಾ ರಾಜಕೀಯದಲ್ಲಿ ಸಾಲದ ಮನ್ನಾದಂತಹ ಪರಿಹಾರಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ’ ಎಂದ ಅವರು, ಸೂಕ್ತ ಬೆಲೆ ನೀಡುವುದು, ಉತ್ಪನ್ನಗಳ ದಾಸ್ತಾನು ಮತ್ತು ಸಾರ್ವಜನಿಕ ವಿತರಣೆಗೆ ಸಮಗ್ರವಾಗಿ ಗಮನ ನೀಡಿದರೆ ಮಾತ್ರ ರೈತರ ಮೂಲ ತೊಂದರೆಗಳನ್ನು ಪರಿಹರಿಸಬಹುದು’ ಎಂದರು.

‘ದುರದೃಷ್ಟವಶಾತ್, 2007ರಲ್ಲಿ ವರದಿಯನ್ನು ನೀಡಿದಾಗ ಆಗಿನ ಸರ್ಕಾರ ರೈತರಿಗಾಗಿ ರಾಷ್ಟ್ರೀಯ ನೀತಿಯ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಸ್ವಾಮಿನಾಥನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.