ಜಮ್ಮು: ‘ಯುಪಿಎ ಸರ್ಕಾರದ ಅವಧಿಯಲ್ಲಿ ಸುಮಾರು ₹ 12 ಲಕ್ಷ ಕೋಟಿ ಮೌಲ್ಯದ ಭ್ರಷ್ಟಾಚಾರವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಆರೋಪಿಸಿದರು. ಇಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಾಟ್ ಪಾರ್ಟಿ (ಪಿಡಿಪಿ) ವಿರುದ್ಧ ಹರಿಹಾಯ್ದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ 42 ಸಾವಿರ ಜನರು ಸತ್ತಿದ್ದಾರೆ. ಇದರ ಹೊಣೆಯನ್ನು ಯಾರು ಹೊರುತ್ತಾರೆ? ಎಂದು ಪ್ರಶ್ನಿಸಿದರು.
‘ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರವಾಗಿದೆ. ಮೋದಿ ಈಗ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ. ಸಂವಿಧಾನದ ವಿಧಿ 376 ರದ್ದತಿ ಬಳಿಕ ಕಾಶ್ಮೀರದಲ್ಲಿ ಶೇ 70ರಷ್ಟು ಭಯೋತ್ಪಾದನೆ ಇಳಿಮುಖವಾಗಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕುಟುಂಬಗಳು ದಶಕಗಳ ಕಾಲ ಆಡಳಿತ ನಡೆಸಿವೆ. ಸಂವಿಧಾನದ ವಿಧಿ 376ರಿಂದಾಗಿ ಅಭಿವೃದ್ಧಿಯೇ ಆಗಿರಲಿಲ್ಲ. ಇಲ್ಲಿ ಭಯೋತ್ಪಾನೆಯ ಕಾರಣದಿಂದ ಸಂಭವಿಸಿದ ಸಾವುಗಳಿಗೆ ಯಾರು ಹೊಣೆ ಎಂದು ನಾನು ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಕೇಳಲು ಬಯಸುತ್ತೇನೆ ಎಂದು ಹೇಳಿದರು.
ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲ ಇಲ್ಲಿ 7,327 ಭಯೋತ್ಪಾದನೆ ಕೃತ್ಯಗಳು ನಡೆದಿದ್ದರೆ, ಎನ್‌ಡಿಎ ಆಡಳಿತದ ಕಳೆದ 9 ವರ್ಷಗಳಲ್ಲಿ ಕೇವಲ 2,350 ಭಯೋತ್ಪಾದನಾ ಕೃತ್ಯಗಳು ಸಂಭವಿಸಿವೆ. ಯುಪಿಎ ಆಡಳಿತಾವಧಿಯಲ್ಲಿ 2,350 ಜನರು ಸತ್ತಿದ್ದರೆ ಎನ್‌ಡಿಎ ಅವಧಿಯಲ್ಲಿ ಕೇವಲ 377 ಜನರು ಸತ್ತಿದ್ದಾರೆ ಎಂದು ಶಾ ಹೋಲಿಕೆ ಮಾಡಿದರು.
ಈಗ ಕಾಶ್ಮೀರದ ಚಿತ್ರಣ ಬದಲಾಗಿದೆ. 2022ರಲ್ಲಿ 1.88 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೂರು ಕುಟುಂಬಗಳು ಆಡಳಿತ ನಡೆಸಿದ್ದ ಅವಧಿಯಲ್ಲಿ ಇದರ ಶೇ 50ರಷ್ಟು ಜನರು ಬಂದಿರಲಿಲ್ಲ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.