ನವದೆಹಲಿ: ಶಿವಮೊಗ್ಗ ಜಿಲ್ಲೆಯ ತುಂಗಾ ಮೇಲ್ದಂಡೆ ನೀರಾವರಿ ಯೋಜನೆಯ ಶೇ 98.72 ಕಾಮಗಾರಿ ಪೂರ್ಣಗೊಂಡಿದ್ದು, 23,690 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ಗುರುವಾರ ಲಿಖಿತ ಉತ್ತರ ನೀಡಿರುವ ಇಲಾಖೆಯ ರಾಜ್ಯ ಸಚಿವ ಬಿಶ್ವೇಶ್ವರ ತುಡು, ಈ ಯೋಜನೆಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಭಾಗಶಃ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಅಂತರ್ ರಾಜ್ಯ ಅಂಶಗಳು ಹಾಗೂ ಜಲವಿಜ್ಞಾನ ಸೇರಿದಂತೆ ವಿವಿಧ ತಾಂತ್ರಿಕ– ಆರ್ಥಿಕ ಅಂಶಗಳನ್ನು ಕೇಂದ್ರ ಜಲ ಆಯೋಗವು 2013ರಲ್ಲಿ ಮೌಲ್ಯಮಾಪನ ಮಾಡಿದೆ. ಈ ಮೌಲ್ಯಮಾಪನದ ಬಳಿಕ ಸಚಿವಾಲಯದ ನೀರಾವರಿ ಸಲಹಾ ಸಮಿತಿಯು ಯೋಜನೆಗೆ 2013ರ ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿತು. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-I ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರನ್ನು ಮಾತ್ರ ಈ ಯೋಜನೆಗೆ ಬಳಸಿಕೊಳ್ಳಬೇಕು ಎಂದು ಜಲ ಆಯೋಗವು ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.