ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷ ಮನೋಜ್ ಸೋನಿ ಅವರು ತಮ್ಮ ಅಧಿಕಾರಾವಧಿ ಮುಗಿಯುವ 5ವರ್ಷಗಳ ಮುನ್ನ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ನೇಮಕಾತಿ ಕುರಿತ ವಿವಾದ ಮತ್ತು ಆರೋಪಗಳಿಗೂ ಮನೋಜ್ ಅವರ ರಾಜೀನಾಮೆಗೂ ಸಂಬಂಧ ಇಲ್ಲ ಎಂದು ಅವು ಹೇಳಿವೆ. ‘ಯುಪಿಎಸ್‌ಸಿ ಅಧ್ಯಕ್ಷರು 15 ದಿನಗಳ ಹಿಂದೆಯೇ ವೈಯಕ್ತಿಕ ಕಾರಣ ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಅದಿನ್ನೂ ಅಂಗೀಕಾರ ಆಗಿಲ್ಲ’ ಎಂದು ಮೂಲಗಳು
ಸ್ಪಷ್ಟಪಡಿಸಿವೆ.
ಪ್ರಸಿದ್ಧ ಶಿಕ್ಷಣ ತಜ್ಞರಾದ ಮನೋಜ್ (59) ಅವರು 2017ರ ಜೂನ್ 28ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು 2023ರ ಮೇ 16ರಂದು ಆಯೋಗದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಅವರ ಅಧಿಕಾರಾವಧಿ 2029ರ ಮೇ 15ಕ್ಕೆ ಕೊನೆಗೊಳ್ಳಲಿದೆ.
ಮನೋಜ್ ಅವರು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುಪಿಎಸ್‌ಸಿಗೆ ನೇಮಕಗೊಳ್ಳುವ ಮುನ್ನ ಅವರು ಗುಜರಾತ್‌ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ, ಬರೋಡಾದ ಮಹಾರಾಜ ಸಯಾಜೀರಾವ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಯುಪಿಎಸ್‌ಸಿ ಅಧ್ಯಕ್ಷರ ನೇತೃತ್ವದಲ್ಲಿ ಗರಿಷ್ಠ 10 ಸದಸ್ಯರನ್ನು ಹೊಂದಬಹುದಾಗಿದ್ದು, ಪ್ರಸ್ತುತ ಏಳು ಸದಸ್ಯರು ಮಾತ್ರ ಇದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ದಾಖಲೆಗಳನ್ನು ತಿರುಚಿ, ವಂಚಿಸಿದ ಆರೋಪದ ಮೇಲೆ ಪೂಜಾ ಖೇಡ್ಕರ್ ವಿರುದ್ಧ ಯುಪಿಎಸ್‌ಸಿ ಶುಕ್ರವಾರ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಅಲ್ಲದೆ ಅವರನ್ನು ಡಿಬಾರ್ ಮಾಡುವ ಸಂಬಂಧ ನೋಟಿಸ್ ನೀಡಿದೆ. ಹೀಗಾಗಿ ಮನೋಜ್ ಅವರ ರಾಜೀನಾಮೆ ವಿಷಯವೂ ಮಹತ್ವ ಪಡೆದುಕೊಂಡಿದೆ.
ಖೇಡ್ಕರ್ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧವೂ ಆರೋಪಗಳು ಕೇಳಿ ಬಂದಿವೆ. ನಕಲಿ ಪ್ರಮಾಣ ಪತ್ರಗಳ ಮೂಲಕ ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಸಂಬಂಧಿಸಿದ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.
‘ವಿವಾದದಿಂದ ಹೊರದೂಡಿರುವಂತಿದೆ’
ನವದೆಹಲಿ: ವೈಯಕ್ತಿಕ ಕಾರಣಗಳನ್ನು ನೀಡಿ ಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ಅವರು ರಾಜೀನಾಮೆ ನೀಡಿರುವುದನ್ನು ಗಮನಿಸಿದರೆ, ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರನ್ನು ಹೊರದೂಡಿರುವಂತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಸಾಂಸ್ಥಿಕವಾಗಿ ಸ್ವಾಧೀನಪಡಿಸಿಕೊಳ್ಳಲು ವ್ಯವಸ್ಥಿತವಾಗಿ ತೊಡಗಿಕೊಂಡಿರುವ ಬಿಜೆಪಿ– ಆರ್‌ಎಸ್‌ಎಸ್, ಆ ಸಂಸ್ಥೆಗಳ ಖ್ಯಾತಿ, ಸಮಗ್ರತೆ ಮತ್ತು ಸ್ವಾಯತ್ತತೆಗೆ ಹಾನಿ ಮಾಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
‘ಯುಪಿಎಸ್‌ಸಿಯನ್ನು ಸುತ್ತಿಕೊಂಡಿರುವ ಬಹು ಹಗರಣಗಳು ರಾಷ್ಟ್ರೀಯ ಕಳವಳಕ್ಕೆ ಕಾರಣವಾಗಿವೆ. ಇದರಿಂದ ಪ್ರಧಾನಿ ಮೋದಿ ಮತ್ತು ಅವರ ಸಿಬ್ಬಂದಿ, ಸಾರ್ವಜನಿಕ ಮತ್ತು ಪಿಂಚನಿ ಸಚಿವರು ಪರಿಶುದ್ಧರಾಗಿ ಬರಬೇಕು. ಜಾತಿ ಮತ್ತು ವೈದ್ಯಕೀಯ ಪ್ರಮಾಣಪತ್ರಗಳನ್ನು ನಕಲಿ ಮಾಡಿರುವ ಹಲವು ಅನರ್ಹ ವ್ಯಕ್ತಿಗಳು ಇಡೀ ವ್ಯವಸ್ಥೆಯನ್ನೇ ವಂಚಿಸಿದ್ದಾರೆ’ ಎಂದು ಖರ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.