ನವದೆಹಲಿ: ‘ಮೀಸಲಾತಿ ಕುರಿತ ಮೇಲ್ಪದರಯೇತರ ಅಭ್ಯರ್ಥಿ ಪ್ರಮಾಣಪತ್ರದ ಅಲಭ್ಯತೆಯಿಂದಾಗಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದರೂ ಕೆಲ ಒಬಿಸಿ ಅಭ್ಯರ್ಥಿಗಳು ಸೇವೆಗೆ ಸೇರಲಾಗಿಲ್ಲ’ ಎಂದು ಕೆಲ ಸಂಸದರು ಸಂಸದೀಯ ಸಮಿತಿ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸದರಾದ ಡಿಎಂಕೆಯ ಟಿ.ಆರ್.ಬಾಲು, ಕಾಂಗ್ರೆಸ್‌ನ ಮಾಣಿಕ್ಯಂ ಟ್ಯಾಗೋರ್, ಸಮಾಜವಾದಿ ಪಕ್ಷದ ರಮಾಶಂಕರ್ ರಾಜ್‌ಭರ್ ಹಾಗೂ ಕೆಲವು ಬಿಜೆಪಿಯ ಸಂಸದರು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸಂಸದ ಗಣೇಶ್ ಸಿಂಗ್ ನೇತೃತ್ವದ ಸಮಿತಿಯು, ಇತರೆ ಹಿಂದುಳಿದ ವರ್ಗಗಳಿಗಾಗಿ ಇರುವ ವಿವಿಧ ಯೋಜನೆಗಳ ಅನುಷ್ಠಾನ ಪ್ರಗತಿ ವಿವರವವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಪಡೆಯುವಾಗ ಕೆಲ ಸಂಸದರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರವೂ ಒಬಿಸಿ ವರ್ಗದ ಅಭ್ಯರ್ಥಿಗಳನ್ನು ತಡೆಯಲು ಮೇಲ್ಪದರಯೇತರ ಅಭ್ಯರ್ಥಿ ಪ್ರಮಾಣಪತ್ರ ವಿಷಯ ಪ್ರಸ್ತಾಪಿಸಲಾಗುತ್ತದೆ. ಇದನ್ನೇ ನೆಪವಾಗಿಸಿ ಈ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಸಿಗುತ್ತಿಲ್ಲ ಎಂದು ಸಂಸದರು ಹೇಳಿದ್ದಾರೆ.
ಸಂಸದರೊಬ್ಬರು, ‘ನಾನು ಈ ವಿಷಯ ಕುರಿತಂತೆ ಪ್ರಧಾನಿಯವರಿಗೂ ಸೆಪ್ಟೆಂಬರ್ ತಿಂಗಳಲ್ಲಿ ಪತ್ರ ಬರೆದಿದ್ದೆ. ಇಂತಹ ಅಭ್ಯರ್ಥಿಗಳ ತಂದೆ ಅಥವಾ ತಾಯಿ ಸಾರ್ವಜನಿಕ ವಲಯ ಸಂಸ್ಥೆಗಳ ಉದ್ಯೋಗಿಗಳಾಗಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.
ಈಗಿನ ಪರಿಸ್ಥಿತಿಯು ಒಬಿಸಿ ಅಭ್ಯರ್ಥಿಗಳಿಗೆ ಅವಕಾಶ ವಂಚಿತರಾಗಿಸಿದೆ. ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.