ನವದೆಹಲಿ:‘ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಿದವರಿಗೆ ಕೇಂದ್ರ ಸರ್ಕಾರ ‘‘ನಗರ ನಕ್ಸಲ್’’ ಎಂಬ ಹಣೆಪಟ್ಟಿ ನೀಡಿದೆ. ‘ನಗರ ನಕ್ಸಲ್’ ಪದದ ಅರ್ಥವೇನು ಎಂಬುದನ್ನು ಸರ್ಕಾರ ವ್ಯಾಖ್ಯಾನಿಸಬೇಕು ಮತ್ತು ಐವರು ಹೋರಾಟಗಾರರು ಈ ವರ್ಗಕ್ಕೆ ಹೇಗೆ ಸೇರುತ್ತಾರೆ ಎಂಬುದನ್ನು ತಿಳಿಸಬೇಕು’ ಎಂದು ಇತಿಹಾಸತಜ್ಞೆ ರೊಮಿಲಾ ಥಾಪರ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರ ಗೃಹಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವವರಲ್ಲಿ ಒಬ್ಬರಾಗಿರುವ ಥಾಪರ್, ‘ಈ ಹೋರಾಟಗಾರರನ್ನು ನಗರ ನಕ್ಸಲ್ ಎಂದು ಕರೆದಿರುವುದು ರಾಜಕೀಯ ನಡೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರವರ ರಾವ್, ಅರುಣ್ ಫೆರೆರಾ, ವೆರ್ನಾನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವಲಖ ಅವರನ್ನು ‘ನಗರ ನಕ್ಸಲ್’ ಎಂದು ಹೇಳಿ ಆಗಸ್ಟ್ 29ರಿಂದ ಗೃಹಬಂಧನದಲ್ಲಿಡಲಾಗಿದೆ.
‘ನಾವೆಲ್ಲರೂ ಹುಟ್ಟಾ ಭಾರತೀಯರು. ಭಾರತೀಯರಾಗಿಯೇ ಇರುತ್ತೇವೆ. ದೇಶದ ಹಿತಕ್ಕಾಗಿ ಹೋರಾಡುತ್ತಿರುವ ಇಂತಹ ಹೋರಾಟಗಾರರನ್ನು ನಗರ ನಕ್ಸಲ್ ಎಂದು ಸಂಬೋಧಿಸಿದ್ದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರ ಗೃಹಬಂಧನ ಪ್ರಶ್ನಿಸಿ ಥಾಪರ್ ಅವರೊಂದಿಗೆ ಆರ್ಥಿಕ ತಜ್ಞರಾದ ದೇವಕಿ ಜೈನ್ ಮತ್ತು ಪ್ರಭಾತ್ ಪಟ್ನಾಯಕ್, ಸಮಾಜಶಾಸ್ತ್ರಜ್ಞ ಪ್ರೊ. ಸತೀಶ್ ಪಾಂಡೆ, ವಕೀಲರಾದ ಮಜ ದರೂವಾಲಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.