ADVERTISEMENT

Manipur Violence | 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನ

ಪಿಟಿಐ
Published 16 ಆಗಸ್ಟ್ 2023, 5:06 IST
Last Updated 16 ಆಗಸ್ಟ್ 2023, 5:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   ಎಎಫ್‌ಪಿ

‌ಇಂಫಾಲ: ಜನಾಂಗೀಯ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಇದೀಗ ಒಂದು ಜನಾಂಗ ನಿಷೇಧ ಹೇರಿದ್ದ ಹಿಂದಿ ಸಿನಿಮಾವನ್ನು ಇನ್ನೊಂದು ಜನಾಂಗದವರು ಪ್ರದರ್ಶಿಸಿದ್ದಾರೆ. ಸುಮಾರು 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾವೊಂದು ಪ್ರದರ್ಶನ ಕಂಡಿದೆ.

ವಿಕ್ಕಿ ಕೌಶಲ್‌ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‌’ ಸಿನಿಮಾವು ಚುರ್ಚಾಂದಪುರದ ರೆಂಗ್‌ಕೈ ಎಂಬಲ್ಲಿ ತೆರೆದ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಂಡಿತು. ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.

ಎರಡು ದಶಕಗಳ ಹಿಂದೆ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನಕ್ಕೆ ಮೈತೇಯಿ ಹಾಗೂ ನಾಗಗಳ ಸಂಘಟನೆಯಾದ ‘ರೆವೆಲ್ಯೂಷನರಿ ಪೀಪಲ್ಸ್‌ ಫ್ರಂಟ್‌’ ನಿಷೇಧ ಹೇರಿತ್ತು. ಹಿಂದಿ ಸಿನಿಮಾ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ 2000ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ADVERTISEMENT

ಈಗ ಕುಕಿ ಸಮುದಾಯದ ಸಂಘಟನೆಯಾದ ‘ಮಾರ್‌ ವಿದ್ಯಾರ್ಥಿ ಒಕ್ಕೂಟ’ (Hmar Students' Association – HSA) ಮಂಗಳವಾರ ಸಿನಿಮಾ ಪ್ರದರ್ಶನವನ್ನು ಆಯೋಜಿಸಿತ್ತು. 23 ವರ್ಷಗಳ ಹಿಂದೆ ರೆವೆಲ್ಯೂಷನರಿ ಪೀಪಲ್ಸ್‌ ಫ್ರಂಟ್‌ ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿ ಈ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು.

‘ನಮ್ಮ ಊರಿನಲ್ಲಿ ಹಿಂದಿ ಸಿನಿಮಾ ಪ್ರದರ್ಶನವಾಗಿ ಎರಡು ದಶಕಗಳು ಕಳೆದಿದ್ದವು. ಸುಮಾರು ವರ್ಷಗಳಿಂದ ಮೈತೇಯಿಗಳು ಹಿಂದಿ ಸಿನಿಮಾಗೆ ನಿಷೇಧ ಹೇರಿದ್ದರು. ಮೈತೇಯಿ ಗುಂಪುಗಳ ದೇಶ ವಿರೋಧಿ ನೀತಿಗಳನ್ನು ಧಿಕ್ಕರಿಸುವ ಹಾಗೂ ದೇಶದ ಮೇಲೆ ನಮ್ಮ ಪ್ರೀತಿಯನ್ನು ತೋರಿಸುವ ಸಲುವಾಗಿ ಸಿನಿಮಾ ಪ್ರದರ್ಶನ ಮಾಡಿದ್ದೇವೆ’ ಎಂದು ಕುಕಿ ಜನಾಂಗದ ಬೆಂಬಲಿತ ಸಂಘಟನೆ ಎಂದು ಹೇಳಿಕೊಳ್ಳುವ ‘ಇಂಡಿಜೀನಿಯಸ್‌ ಟ್ರೈಬಲ್‌ ಲೀಸರ್ಡ್ ಫೋರಂ’ನ ವಕ್ತಾರ ಗಿಂಜಾ ವುಲಾಜೋಂಗ್‌ ಹೇಳಿದ್ದಾರೆ.

ರಾಜ್ಯ ರಾಜಧಾನಿ ಇಂಫಾಲದಿಂದ 63 ಕಿ.ಮಿ ದೂರದಲ್ಲಿ ಈ ಘಟನೆ ನಡೆದಿದ್ದು, ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಲಾಯಿತು.

ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಈವರೆಗೂ 160 ಮಂದಿ ಸಾವಿಗೀಡಾಗಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.