ADVERTISEMENT

ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ 

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 18:31 IST
Last Updated 10 ಡಿಸೆಂಬರ್ 2018, 18:31 IST
   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ (55) ಅವರು ಸೋಮವಾರ ಹಠಾತ್ತಾಗಿ ರಾಜೀನಾಮೆ ನೀಡಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ತಕ್ಷಣದಿಂದ ಈ ಹುದ್ದೆ ತೊರೆಯುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಕೆಲ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಕೇಂದ್ರೀಯ ಬ್ಯಾಂಕ್‌ಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ಹಿಂದೆ ಯಾವತ್ತೂ ಬಳಸದ ಆರ್‌ಬಿಐ ಕಾಯ್ದೆ 1934ರ ಸೆಕ್ಷನ್‌ 7 ಬಳಸುವ ಸಂಬಂಧ ಚರ್ಚೆಗೆ ಅಕ್ಟೋಬರ್‌ನಲ್ಲಿ ಚಾಲನೆ ನೀಡಿತ್ತು. ಆರ್‌ಬಿಐ ಬಳಿ ಇರುವ ಮೀಸಲು ನಿಧಿಯ ಕೆಲ ಭಾಗವನ್ನು ತನಗೆ ವರ್ಗಾಯಿಸಬೇಕು ಎಂದೂ ಸರ್ಕಾರ ಪಟ್ಟು ಹಿಡಿದಿತ್ತು. ಆದರೆ ಆರ್‌ಬಿಐ, ಕೇಂದ್ರದ ನಿಲುವಿಗೆ ಪ್ರತಿರೋಧ ಒಡ್ಡಿತ್ತು. ಇದು ಸರ್ಕಾರ ಮತ್ತು ಆರ್‌ಬಿಐ ನಡುವಣ ಬಾಂಧವ್ಯ ಹಳಸಲು ಕಾರಣವಾಗಿತ್ತು.

ADVERTISEMENT

ಉರ್ಜಿತ್‌ ಅವರನ್ನು 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಆರ್‌ಬಿಐನ 24ನೇ ಗವರ್ನರ್‌ ಆಗಿ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಿಸಲಾಗಿತ್ತು. ಅವರ ಅಧಿಕಾರಾವಧಿ ಇನ್ನೂ 9 ತಿಂಗಳು ಬಾಕಿ ಇತ್ತು.

ಯಾವುದೇ ಕಾರಣಕ್ಕೆ ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಜತೆ ರಾಜಿ ಮಾಡಿಕೊಂಡರೆ ಬಂಡವಾಳ ಪೇಟೆಯು ಹೂಡಿಕೆದಾರರ ಆಕ್ರೋಶಕ್ಕೆ ತುತ್ತಾಗಲಿದೆ ಎಂದು ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ ಅವರು ಹಿಂದಿನ ತಿಂಗಳು ಬಹಿರಂಗ ಹೇಳಿಕೆ ನೀಡಿದ ನಂತರ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಣ ವಿವಾದ ತಾರಕಕ್ಕೆ ಏರಿತ್ತು.

ದುರ್ಬಲ ಬ್ಯಾಂಕ್‌ಗಳ ಮೇಲಿನ ನಿಯಂತ್ರಣ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದುತನ ಸಮಸ್ಯೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲ ನೀಡಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ತನ್ನ ನಿಲುವು ಸಡಿಲಗೊಳಿಸಬೇಕು ಎನ್ನುವುದು ಕೇಂದ್ರದ ನಿಲುವಾಗಿತ್ತು.

ಐದನೆಯವರು: ಉರ್ಜಿತ್‌ ಅವರು ಅವಧಿಗೆ ಮೊದಲೇ ರಾಜೀನಾಮೆ ನೀಡಿದ ಆರ್‌ಬಿಐನ ಐದನೇ ಗವರ್ನರ್‌ ಎನಿಸಿದರು. ಈ ಹಿಂದೆ ಬೆನೆಗಲ್‌ ರಾಮರಾವ್‌ (957), ಕೆ.ಆರ್‌.ಪುರಿ (1977), ಆರ್‌.ಎನ್‌.ಮಲ್ಹೋತ್ರಾ (1990) ಮತ್ತು ಎಸ್‌. ವೆಂಕಿಟರಮಣನ್‌ (1992)
ಈ ಹಿಂದೆ ಅವಧಿ ಪೂರೈಸುವಮೊದಲೇ ರಾಜೀನಾಮೆನೀಡಿದ್ದರು.

ರಾಜೀನಾಮೆ ಪತ್ರದ ಪೂರ್ಣ

ಪಾಠ : ‘ವೈಯಕ್ತಿಕ ಕಾರಣಗಳಿಗಾಗಿ ನಾನು ಹುದ್ದೆಯಿಂದ ತಕ್ಷಣಕ್ಕೆ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಹಲವಾರು ವರ್ಷ ಗಳಿಂದ ಅನೇಕ ಹುದ್ದೆಗಳನ್ನು ನಿಭಾಯಿಸಲು ದೊರೆತ ಅವಕಾಶವು ನನಗೆ ಸಂದ ಗೌರವ ವಾಗಿದೆ.ನನ್ನ ಸಹೋದ್ಯೋಗಿಗಳು ಮತ್ತು ನಿರ್ದೇಶಕ ಮಂಡಳಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ’.

ವಿಶ್ವನಾಥನ್‌ಗೆ ಹೊಣೆ?

ಡೆಪ್ಯುಟಿ ಗವರ್ನರ್‌ಗಳ ಪೈಕಿ ಹಿರಿಯರಾದ ಎನ್. ಎಸ್‌. ವಿಶ್ವನಾಥನ್‌ ಅವರನ್ನು ಆರ್‌ಬಿಐನ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.

ಹಾಗೊಂದು ವೇಳೆ ಈ ನೇಮಕ ನಡೆದರೆ, ಇದೇ ಶುಕ್ರವಾರ ನಡೆಯಲಿರುವ ನಿರ್ದೇಶಕ ಮಂಡಳಿ ಸಭೆಯಲ್ಲಿ ವಿಶ್ವನಾಥನ್‌ ಅವರು ಅಧ್ಯಕ್ಷತೆವಹಿಸಲಿದ್ದಾರೆ.

***

* ಇನ್ನೂ 9 ತಿಂಗಳು ಅಧಿಕಾರಾವಧಿ ಬಾಕಿ

* ಕೆಲ ವಿಷಯಗಳಿಗೆ ಆರ್‌ಬಿಐ, ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷ

* ಆರ್‌ಬಿಐನ ಸ್ವಾಯತ್ತತೆ ಸಡಿಲಿಸದಿರಲು ಪಟ್ಟು ಹಿಡಿದಿದ್ದ ಉರ್ಜಿತ್‌

***

ಉರ್ಜಿತ್‌ ಅವರದ್ದು, ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಅವ್ಯವಸ್ಥೆ ನಿವಾರಿಸಿ ಶಿಸ್ತು ರೂಢಿಸಿದ, ಹಣಕಾಸು ಸ್ಥಿರತೆ ಸಾಧಿಸಿದ ವೃತ್ತಿಪರತೆಯ, ಕಳಂಕರಹಿತ ವ್ಯಕ್ತಿತ್ವ

–ನರೇಂದ್ರ ಮೋದಿ,ಪ್ರಧಾನಿ

ಪಟೇಲ್‌ ರಾಜೀನಾಮೆಯಿಂದ ನನಗೆ ಆಶ್ಚರ್ಯವೇನೂ ಆಗಿಲ್ಲ. ಯಾವುದೇ ಸ್ವಾಭಿಮಾನಿ ವಿದ್ವಾಂಸ ಈ ಎನ್‌ಡಿಎ ಸರ್ಕಾರದ ಜತೆ ಕೆಲಸ ಮಾಡಲು ಇಚ್ಛಿಸುವುದಿಲ್ಲ

–ಪಿ. ಚಿದಂಬರಂ,ಕಾಂಗ್ರೆಸ್‌ ಮುಖಂಡ

ಪಟೇಲ್‌ ಜತೆಗಿನ ಒಡನಾಟ ನನ್ನ ಪಾಲಿಗೆ ಸಂತಸದ ಸಂಗತಿಯಾಗಿತ್ತು. ಅವರ ತೀಕ್ಷ್ಣ ಸ್ವರೂಪದ ಬುದ್ಧಿವಂತಿಕೆಯಿಂದ ನಾನೂ ಸಾಕಷ್ಟು ಕಲಿತಿರುವೆ

–ಅರುಣ್‌ ಜೇಟ್ಲಿ,ಕೇಂದ್ರ ಹಣಕಾಸು ಸಚಿವ

ವಿವಾದಾತ್ಮಕ ವಿಷಯಗಳಿಗೆ ಸರ್ಕಾರ ಮತ್ತು ಆರ್‌ಬಿಐ ಒಮ್ಮತಾಭಿಪ್ರಾಯಕ್ಕೆ ಬರುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ

–ಎಸ್‌. ಗುರುಮೂರ್ತಿ, ಆರ್‌ಬಿಐ ನಿರ್ದೇಶಕ ಮಂಡಳಿಯಲ್ಲಿನ ಆರೆಸ್ಸೆಸ್‌ ವಿಚಾರಧಾರೆಯ ಸ್ವತಂತ್ರ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.