ADVERTISEMENT

ನಾರಾಯಣ ಮೂರ್ತಿಯವರನ್ನು ಪೆಟ್ಟಿಗೆ ಮೇಲೆ ಮಲಗಿಸಿದ್ದ ಅಮೆರಿಕ ಕ್ಲೈಂಟ್‌!

ಪಿಟಿಐ
Published 7 ಜನವರಿ 2024, 16:24 IST
Last Updated 7 ಜನವರಿ 2024, 16:24 IST
ಎನ್‌.ಆರ್‌.ನಾರಾಯಣಮೂರ್ತಿ
ಎನ್‌.ಆರ್‌.ನಾರಾಯಣಮೂರ್ತಿ   

ನವದೆಹಲಿ: ಇನ್ಫೊಸಿಸ್‌ನ ಆರಂಭಿಕ ದಿನಗಳಲ್ಲಿ ಎನ್‌.ಆರ್‌.ನಾರಾಯಣ ಮೂರ್ತಿ ಅವರು ಕ್ಲೈಂಟ್ ಒಬ್ಬರ ಕೆಲಸಕ್ಕಾಗಿ ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಅಮೆರಿಕದ ಉದ್ಯಮಿಯೊಬ್ಬರು ಅವರ ಸ್ವಂತ ಮನೆಯಲ್ಲಿ ನಾಲ್ಕು ಬೆಡ್‌ರೂಮ್‌ಗಳಿದ್ದರೂ ಕರ್ಟನ್‌ಗಳಿಂದ ಮುಚ್ಚಿದ್ದ, ಕಿಟಕಿಗಳಿಲ್ಲದ ಸ್ಟೋರ್‌ರೂಮ್‌ನಲ್ಲಿ ದೊಡ್ಡ ಪೆಟ್ಟಿಗೆ ಮೇಲೆ ಮೂರ್ತಿ ಅವರನ್ನು ಮಲಗಿಸಿದ್ದರಂತೆ.

ಭಾರತೀಯ ಮೂಲದ ಅಮೆರಿಕ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಯ ಜೀವನದ ಆರಂಭಿಕ ವರ್ಷಗಳನ್ನು ಒಳಗೊಂಡ ಅವರ ಜೀವನಚರಿತ್ರೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ. 

ಈ ಆದರ್ಶ ದಂಪತಿಯ ಹಲವು ಅನುಭವದ ಕಥಾನಕಗಳು ‘ಆ್ಯನ್ ಅನ್‌ಕಾಮನ್‌ ಲವ್‌: ದಿ ಅರ್ಲಿ ಲೈಫ್‌ ಆಫ್‌ ಸುಧಾ ಆ್ಯಂಡ್‌ ನಾರಾಯಣ ಮೂರ್ತಿ’ ಕೃತಿಯಲ್ಲಿ ತುಂಬಿವೆ. ಮೂರ್ತಿ ದಂಪತಿಯ ಪ್ರಣಯದಿಂದ ಹಿಡಿದು ಅವರ ಮದುವೆ, ಪೋಷಕರಾದ ಹಂತ, ಇನ್ಫೊಸಿಸ್‌ ಸ್ಥಾಪನೆಯ ಆರಂಭಿಕ ವರ್ಷಗಳವರೆಗಿನ ಕಥನ ಈ ಕೃತಿಯಲ್ಲಿದೆ. ಇದನ್ನು ಜುಗರ್‌ನಾಟ್ ಬುಕ್ಸ್ ಪ್ರಕಟಿಸಿದೆ. 

ADVERTISEMENT

ನ್ಯೂಯಾರ್ಕ್ ಮೂಲದ ಡಾಟಾ ಬೇಸಿಕ್ಸ್ ಕಾರ್ಪೊರೇಷನ್ ಕಂಪನಿಯ ಮುಖ್ಯಸ್ಥರಾಗಿದ್ದ ಡಾನ್ ಲೈಲ್ಸ್ ಅವರೇ ವಿಚಿತ್ರ ಸ್ವಭಾವದ ಕ್ಲೈಂಟ್ ಆಗಿದ್ದರು. ಕೆಲವೊಮ್ಮೆ ಮೂರ್ತಿ ಅವರಿಗೆ ಡಾನ್‌ ಅವರಿಂದ ವಿಳಂಬ ಪಾವತಿ ಸೇರಿದಂತೆ ಹಲವು ಅಹಿತಕರ ಅನುಭವ ಆಗಿರುವುದನ್ನು ಈ ಪುಸ್ತಕದಲ್ಲಿ ಹೊರಗೆಡವಿದ್ದಾರೆ.

ತನ್ನ ಉದಯೋನ್ಮುಖ ಕಂಪನಿಯ ಸಲುವಾಗಿ ಮೂರ್ತಿ ಅವರು ಡಾನ್‌ ಅವರ ಈ ನಡವಳಿಕೆಯನ್ನು ಸಹಿಸಿಕೊಂಡಿದ್ದರು. ಆದರೆ, ಪೆಟ್ಟಿಗೆಯ ಮೇಲೆ ಮಲಗಿ ನಿದ್ರಿಸುವಂತೆ ಮಾಡಿದ್ದ ಈ ಘಟನೆಯು ನಿಜವಾಗಿಯೂ ಮೂರ್ತಿಯವರನ್ನು ಆಘಾತಗೊಳಿಸಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.