ತಿರುವಾವೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸುವು ಬಹುತೇಕ ಕಷ್ಟವಾಗಿದೆ. ಮತ ಎಣಿಕೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಅವರ ಪೂರ್ವಜರ ಗ್ರಾಮವಾದ ತಮಿಳುನಾಡಿನ ತಿರುವಾವೂರು ಜಿಲ್ಲೆಯ ತುಳಸೇಂದ್ರಪುರಂನ ಜನರ ಮುಖದಲ್ಲಿ ನಿರಾಸೆ ಆವರಿಸಿದೆ.
ಬೆಳಿಗ್ಗೆಯಿಂದಲೂ ಚುನಾವಣಾ ಫಲಿತಾಂಶ ತಿಳಿದುಕೊಳ್ಳಲು ಜನರು ಟಿ.ವಿ ಮುಂದೆ ಕುಳಿತಿದ್ದರು. ಹಲವು ವೆಬ್‌ಸೈಟ್‌ಗಳಲ್ಲಿ ಫಲಿತಾಂಶದ ಬಗ್ಗೆ ಕುತೂಹಲದ ಕಣ್ಣಿಟ್ಟಿದ್ದರು. ಕಮಲಾ ಹ್ಯಾರಿಸ್ ಅವರ ಗೆಲುವಿಗೆ ಹಲವು ಗ್ರಾಮಸ್ಥರು, ಶ್ರೀ ಧರ್ಮ ಸಾಸ್ಥ ಪೆರುಮಾಳ್ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
‘ನಾವು ಅವರ ಗೆಲುವನ್ನು ನಿರೀಕ್ಷಿಸುತ್ತಿದ್ದೆವು. ದೀಪಾವಳಿಗಿಂತ ಅದ್ಧೂರಿ ಸಂಭ್ರಮಾಚರಣೆ ಉದ್ದೇಶಿಸಿದ್ದೆವು. ಪಟಾಕಿ ಸಿಡಿಸಲು, ಸಿಹಿ ಹಂಚಲು, ದೇವಾಲಯಗಳಲ್ಲಿ ಪೂಜೆ ನಡೆಸಲು, ಜನರಿಗೆ ಊಟ ನೀಡಲು ಸಿದ್ಧತೆ ಮಾಡಿಕೊಂಡಿದ್ದೆವು’ ಎಂದು ಡಿಎಂಕೆ ಪಕ್ಷದ ತಿರುವಾವೂರು ಜಿಲ್ಲೆಯ ಪ್ರತಿನಿಧಿ ಹಾಗೂ ತುಳಸೇಂದ್ರಪುರಂನ ನಾಯಕ ಜೆ. ಸುಧಾಕರ್ ಹೇಳಿದ್ದಾರೆ.
‘ಸೋಲು–ಗೆಲುವು ಜೀವನದ ಭಾಗ. ಇದೊಂದು ಕಠಿಣ ಹೋರಾಟ. ಅವರ ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ಅವರು ಹೋರಾಟಗಾರ್ತಿ, ಪುನರಾಗಮನ ಮಾಡುತ್ತಾರೆ. ಕಮಲಾ ಅಧ್ಯಕ್ಷರಾಗುತ್ತಾರೆ ಎಂದು ಗ್ರಾಮದ ಪ್ರತಿಯೊಬ್ಬರು ನಿರೀಕ್ಷಿಸುತ್ತಿದ್ದರು’ ಎಂದು ಅವರು ನುಡಿದಿದ್ದಾರೆ.
‘ಮುಂದಿನ ಬಾರಿ ಗೆಲುವು ಸಾಧಿಸಿ ಅವರು ನಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಆ ದಿನ ಬಂದರೆ ನಾವು ಅವರಿಗೆ ಭರ್ಜರಿ ಸ್ವಾಗತ ಕೋರಲಿದ್ದೇವೆ. ಭಾರತದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಸುಧಾಕರ್ ಹೇಳಿದ್ದಾರೆ.
ಇಂದು ಅಸಾಧ್ಯವಾದರೂ ಭವಿಷ್ಯದಲ್ಲಿ ಅವರು ಅಮೆರಿಕ ಅಧ್ಯಕ್ಷರಾಗಲಿದ್ದಾರೆ. ಅವರ ಹೋರಾಟ ಮುಂದುವರಿಯಲಿದೆ ಎಂದು ಗ್ರಾಮಸ್ಥರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.