ADVERTISEMENT

ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2024, 11:37 IST
Last Updated 28 ಜೂನ್ 2024, 11:37 IST
<div class="paragraphs"><p>ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ&nbsp; </p></div>

ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ 

   

ನವದೆಹಲಿ: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಅಮೆರಿಕದ ವಿದೇಶಾಂಗ ಇಲಾಖೆಯ ವರದಿಯಲ್ಲಿ ಮಾಡಿರುವ ಟೀಕೆಗಳನ್ನು ವಿದೇಶಾಂಗ ಸಚಿವಾಲಯ ಶುಕ್ರವಾರ ಸಾರಾಸಗಟಾಗಿ ತಿರಸ್ಕರಿಸಿದೆ.

‘ಈ ವರದಿಯು ಗಾಢವಾದ ಪಕ್ಷಪಾತದಿಂದ ಕೂಡಿದ್ದು, ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಸಿದ್ಧಪಡಿಸಿದಂತಿದೆ ಎಂಬುದು ಕಂಡುಬರುತ್ತಿದೆ’ ಎಂದು ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್‌ ಹೇಳಿದ್ದಾರೆ.

ADVERTISEMENT

‘ಭಾರತದ ವಿರುದ್ಧ ತಾನು ಈ ಮೊದಲೇ ಕಲ್ಪಿಸಿಕೊಂಡಿರುವ ಸಂಕಥನವನ್ನು ಪ್ರಚುರಪಡಿಸುವುದಕ್ಕಾಗಿ ಆಯ್ದ ಕೆಲ ಘಟನೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಜೈಸ್ವಾಲ್‌ ತಿರುಗೇಟು ನೀಡಿದ್ದಾರೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ವರದಿಯನ್ನು ಇತ್ತೀಚೆಗೆ ಅಮೆರಿಕ ಬಿಡುಗಡೆ ಮಾಡಿತ್ತು.

ಈ ವರದಿ ಬಿಡುಗಡೆ ಮಾಡಿ ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್, ‘ಭಾರತದಲ್ಲಿನ ಮತಾಂತರ ವಿರೋಧಿ ಕಾನೂನುಗಳು, ದ್ವೇಷಭಾಷಣ ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಮನೆಗಳು ಹಾಗೂ ಪ್ರಾರ್ಥನಾ ಸ್ಥಳಗಳನ್ನು ನೆಲಸಮಗೊಳಿಸುತ್ತಿರುವುದು ಕಳವಳಕಾರಿ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಈ ಪ್ರತಿಕ್ರಿಯೆ ನೀಡಿದೆ.

‘ಈ ಹಿಂದಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿದ್ದ ವರದಿಗಳು ಸಹ ಪಕ್ಷಪಾತದಿಂದ ಕೂಡಿದ್ದವು. ಭಾರತದ ಸಾಮಾಜಿಕ ಸಂರಚನೆ ಕುರಿತು ಅರಿವಿನ ಕೊರತೆ ಇರುವುದು ಈ ವರದಿಗಳನ್ನು ಗಮನಿಸಿದಾಗ ಕಂಡುಬರುತ್ತದೆ’ ಎಂದು ಜೈಸ್ವಾಲ್‌ ಹೇಳಿದ್ದಾರೆ.

‘ಈ ವರದಿಯನ್ನು ಭಾರತ ತಿರಸ್ಕರಿಸುತ್ತದೆ. ಈ ವರದಿಯು ಸುಳ್ಳು ಆರೋಪಗಳು ಹಾಗೂ ತಪ್ಪು ವಿವರಣೆಗಳಿಂದ ಕೂಡಿದೆ. ತನಗೆ ಬೇಕಾದ ಸಂಗತಿಗಳನ್ನು ವರದಿಯಲ್ಲಿ ಬಳಸಿಕೊಳ್ಳಲಾಗಿದೆ. ಏಕಪಕ್ಷೀಯ ಮತ್ತು ಪಕ್ಷಪಾತ ಧೋರಣೆಯ ಮೂಲಗಳನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಅಮೆರಿಕ ಸಿದ್ಧಪಡಿಸಿರುವ ಈ ವರದಿಯು ಭಾರತೀಯ ನ್ಯಾಯಾಲಯಗಳು ನೀಡಿರುವ ನಿರ್ದಿಷ್ಟ ತೀರ್ಪುಗಳ ಋಜುತ್ವವನ್ನು ಪ್ರಶ್ನಿಸುವಂತಿದೆ.
–ರಣಧೀರ ಜೈಸ್ವಾಲ್, ವಿದೇಶಾಂಗ ಸಚಿವಾಲಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.