ಹೈದರಾಬಾದ್: ಈಶಾ ಫೌಂಡೇಷನ್ ನಡೆಸುತ್ತಿರುವ ಶಾಲೆಯಲ್ಲಿ ತಮ್ಮ ಮಗನ ಮೇಲೆ ಲೈಂಗಿಕ ಕಿರುಕುಳ ನಡೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈಶಾ ಫೌಂಡೇಷನ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಯಾವುದೇ ವ್ಯವಸ್ಥೆಗೆ ಬದ್ಧವಾಗದೆ ನಿರಂಕುಶವಾಗಿ ನಡೆಸಲಾಗುತ್ತಿದೆ ಎಂದು ಆಂಧ್ರಪ್ರದೇಶದ ರಾಜಮಂಡ್ರಿಯ ದಂಪತಿ ಸತ್ಯ ನರೇಂದ್ರ ಮತ್ತು ಯಾಮಿನಿ ರಾಗಣಿ ದೂರಿದ್ದಾರೆ.
ಈಶಾ ಹೋಮ್ ಸ್ಕೂಲ್‌ನಲ್ಲಿ (ಐಎಸ್‌ಎಚ್) ಬಾಲಕನೊಬ್ಬ ಕಳೆದ ಮೂರು ವರ್ಷಗಳಿಂದ ತಮ್ಮ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಆಡಳಿತ ಮಂಡಳಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸತ್ಯ ನರೇಂದ್ರ ಮತ್ತು ಯಾಮಿನಿ ರಾಗಣಿ ದಂಪತಿಯು ಈಶಾ ಫೌಂಡೇಷನ್‌ನ ಮಾಜಿ ಸ್ವಯಂಸೇವಕರಾಗಿದ್ದಾರೆ. 15 ವರ್ಷಗಳಿಂದ ಸ್ವಯಂಸೇವಕರಾಗಿದ್ದ ಅವರು ಇತ್ತೀಚೆಗೆ ಈಶಾ ಫೌಂಡೇಷನ್‌ನಿಂದ ಹೊರನಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಈಶಾ ಫೌಂಡೇಷನ್ ಶಾಲೆಗಳಲ್ಲಿ ಹದಿಹರೆಯದ ಬಾಲಕಿಯರು ಕೆಲವು ಆಚರಣೆಗಳಲ್ಲಿ ಬರಿ ಎದೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ ಎಂಟು ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದಂಪತಿ ತಿಳಿಸಿದ್ದಾರೆ.
‘ನಾವು ಒಂದು ದಶಕಕ್ಕೂ ಹೆಚ್ಚು ಕಾಲ ಸದ್ಗುರುಗಳ ಪ್ರಮುಖ ಅನುಯಾಯಿಗಳಾಗಿದ್ದೇವೆ. ನಮ್ಮ ಮಗ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಬೆಳೆಯಬೇಕೆಂದು ಬಯಸಿ, ನಮ್ಮ ಮಗನನ್ನು ಈಶಾ ಹೋಮ್ ಸ್ಕೂಲ್‌ಗೆ ಸೇರಿಸಿದೆವು. ಆದರೆ, ಲೈಂಗಿಕ ಕಿರುಕುಳದಿಂದಾಗಿ ಆತ ಸಾಕಷ್ಟು ಆಘಾತಕ್ಕೆ ಒಳಗಾಗಿದ್ದಾನೆ. ಈ ಕುರಿತು ನಾವು ಆಡಳಿತ ಮಂಡಳಿ ಗಮನಕ್ಕೆ ತಂದಾಗ ಆರಂಭದಲ್ಲಿ ನಮ್ಮ ಮಗನನ್ನೇ ದೂಷಿಸಿದ್ದರು. ಪ್ರಕರಣ ದಾಖಲಿಸದಂತೆ ಜಗ್ಗಿ ವಾಸುದೇವ್ ಮತ್ತು ಈಶಾ ಫೌಂಡೇಷನ್‌ನಿಂದ ಪ್ರಭಾವ ಬೀರಲಾಗಿದೆ’ ಎಂದು ಸತ್ಯ ನರೇಂದ್ರ ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.
‘ಈಶಾ ಫೌಂಡೇಷನ್ ಶಾಲೆಯಲ್ಲಿ ಮಕ್ಕಳು ಮೃತಪಟ್ಟರೂ ಈ ವಿಷಯವನ್ನು ಮರೆಮಾಚಲಾಗಿದೆ. ಜತೆಗೆ, 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದರೂ ಈ ವಿಷಯ ಬಹಿರಂಗವಾಗದಂತೆ ತಡೆಯಲಾಗಿದೆ. ಈಶಾ ವಿದ್ಯಾ, ಈಶಾ ಸಂಕ್ಷತ್ರಿ ಮತ್ತು ಈಶಾ ಹೋಮ್ ಸ್ಕೂಲ್‌ನ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಜಗ್ಗಿ ವಾಸುದೇವ್ ಅವರು ಮೌನವಾಗಿದ್ದಾರೆ’ ಎಂದು ಯಾಮಿನಿ ಆಕ್ರೋಶ ಹೊರಹಾಕಿದ್ದಾರೆ.
2024ರ ಜೂನ್ 21ರಂದು 16 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದ. ಆದರೆ, ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ ಎಂದು ಯಾಮಿನಿ ಆರೋಪಿಸಿದ್ದಾರೆ.
ಮಾನವ ಕಲ್ಯಾಣದ ನೆಪದಲ್ಲಿ ಈಶಾ ಫೌಂಡೇಷನ್‌ನವರು ನಿಯಮಗಳನ್ನು ಪಾಲನೆ ಮಾಡದೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಂಪತಿ ಒತ್ತಾಯಿಸಿದ್ದಾರೆ.
ಈಚೆಗೆ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಷನ್ ಆವರಣದಲ್ಲಿ ತನ್ನ ಇಬ್ಬರು ಪುತ್ರಿಯರು ಬಂಧಿಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಈ ಇಬ್ಬರೂ ಮಹಿಳೆಯರು ವಯಸ್ಕರಿದ್ದಾರೆ. ಅಲ್ಲದೆ, ಅವರು ಯಾವುದೇ ಬಲವಂತವಿಲ್ಲದೆ ಸ್ವಯಂಪ್ರೇರಣೆಯಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.