ವಾಷಿಂಗ್ಟನ್: ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಭಾರತ–ಪಾಕಿಸ್ತಾನ ಗಡಿ ಮತ್ತು ನಕ್ಸಲರು ಸಕ್ರಿಯವಾಗಿರುವ ಭಾರತದ ಮಧ್ಯ ಮತ್ತು ಪೂರ್ವ ಭಾಗಗಳಿಗೆ ತೆರಳದಂತೆ ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.
ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಅಮೆರಿಕ, ಹೆಚ್ಚಿನ ಎಚ್ಚರಿಕೆಯಿಂದಿರಲು ತಿಳಿಸಿದೆ.
‘ಭಯೋತ್ಪಾದನೆ ಮತ್ತು ಅಶಾಂತಿ ಹಿನ್ನೆಲೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು–ಕಾಶ್ಮೀರಕ್ಕೆ(ಪೂರ್ವ ಲಡಾಖ್ ಮತ್ತು ಅದರ ರಾಜಧಾನಿ ಲೇಹ್ ಹೊರತುಪಡಿಸಿ) ತೆರಳಬೇಡಿ. ಸೇನಾ ಚಟುವಟಿಕೆಗಳ ಕಾರಣ ಭಾರತ–ಪಾಕಿಸ್ತಾನ ಗಡಿಯೂ ಸುರಕ್ಷಿತವಲ್ಲ. ನಕ್ಸಲರು ಸಕ್ರಿಯವಾಗಿರುವ ಭಾರತದ ಮಧ್ಯ ಮತ್ತು ಪೂರ್ವ ಭಾಗಗಳಿಗೆ ಪ್ರವಾಸ ಬೇಡ. ಹಿಂಸಾಚಾರ ಪೀಡಿತ ಮಣಿಪುರಕ್ಕೂ ಪ್ರಯಾಣ ಬೆಳಸಬೇಡಿ’ ಎಂದು ಅದು ತಿಳಿಸಿದೆ.
‘ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ ಎಂದು ಅಲ್ಲಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ನಡೆದಿರುವುದು ವರದಿಯಾಗಿದೆ. ಇನ್ನು ಭಯೋತ್ಪಾದಕರು ಯಾವುದೇ ಸೂಚನೆ ನೀಡದೆ ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆ ಮತ್ತು ಶಾಪಿಂಗ್ ಮಾಲ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಾರೆ’ ಎಂದು ಹೇಳಿದೆ.
‘ಭಾರತದಲ್ಲಿ ಪ್ರಯಾಣಿಸುವ ಅಮೆರಿಕದ ಸರ್ಕಾರಿ ಉದ್ಯೋಗಿಗಳು ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಪೂರ್ವಾನುಮತಿ ಪಡೆಯಬೇಕು. ಹಾಗೆಯೇ ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡುವಾಗಲೂ ಅನುಮತಿ ಪಡೆಯುವ ಅಗತ್ಯವಿದೆ’ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.