ವಾಷಿಂಗ್ಟನ್: ಕಳೆದ ತಿಂಗಳು ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ 'ಇಂಡಿಯಾ ಡೇ ಪರೇಡ್'ನಲ್ಲಿ ಬುಲ್ಡೋಜರ್ ಪ್ರದರ್ಶಿಸಿದ್ದನ್ನು ಅಮೆರಿಕದ ಇಬ್ಬರು ಸೆನೆಟರ್‌ಗಳು ಖಂಡಿಸಿದ್ದಾರೆ.
ಭಾರತೀಯ – ಅಮೆರಿಕನ್ ಮುಸ್ಲಿಂ ಕೌನ್ಸಿಲ್, ಸಿಎಐಆರ್‌ನ ನ್ಯೂಜೆರ್ಸಿ ನಿಯೋಗ ಮತ್ತು ‘ಇಂಡಿಯಾ ಡೇ ಪರೇಡ್’ನಲ್ಲಿ ಬುಲ್ಡೋಜರ್ ಪ್ರದರ್ಶನವನ್ನು ವಿರೋಧಿಸಿದ್ದವರು ನಮ್ಮನ್ನು ಎಡಿಸನ್ ಸಿಟಿಯಲ್ಲಿ ಭೇಟಿಯಾಗಿದ್ದರು ಎಂದು ಸೆನೆಟರ್‌ಗಳಾದ ಬಾಬ್ ಮೆನೆಂಡೆಜ್ ಮತ್ತು ಕೋರಿ ಬೂಕರ್ ತಿಳಿಸಿದ್ದಾರೆ.
‘ಭಾರತದಲ್ಲಿ ಬುಲ್ಡೋಜರ್ ಎಂಬುದು ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಬೆದರಿಸುವ ಸಂಕೇತವಾಗಿದೆ. ‘ಇಂಡಿಯಾ ಡೇ ಪರೇಡ್’ನಲ್ಲಿ ಅದನ್ನು ಪ್ರದರ್ಶಿಸಿದ್ದು ತಪ್ಪು’ ಎಂದು ಇಬ್ಬರೂ ನಾಯಕರು ಅಭಿಪ್ರಾಯಪ್ಟಿದ್ದಾರೆ.
‘ದಕ್ಷಿಣ ಏಷ್ಯಾದ ಸಮುದಾಯಗಳಿಗೆ ಮತ್ತು ದೇಶದ ಕೆಲವು ವೈವಿಧ್ಯಮಯ ಸಮುದಾಯಗಳಿಗೆ ನ್ಯೂಜೆರ್ಸಿಯು ನೆಲೆವೀಡಾಗಿದೆ. ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳು ಇಲ್ಲಿ ಯಾವುದೇ ಬೆದರಿಕೆ ಅಥವಾ ಭಯವಿಲ್ಲದೆ ಬದುಕುವ ಹಕ್ಕನ್ನು ಹೊಂದಿವೆ’ ಎಂದು ಇಬ್ಬರು ಸೆನೆಟರ್‌ಗಳು ತಮ್ಮ ಜಂಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಗಸ್ಟ್ 14 ರಂದು ಓಕ್ ಟ್ರೀ ರಸ್ತೆಯಲ್ಲಿ ನಡೆದ ‘ಇಂಡಿಯಾ ಡೇ ಪರೇಡ್’ ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರಗಳನ್ನು ಹೊಂದಿರುವ ಬುಲ್ಡೋಜರ್ ಅನ್ನು ಪ್ರದರ್ಶಿಸಲಾಯಿತು. ಎಡಿಸನ್ ಮೇಯರ್ ಸ್ಯಾಮ್ ಜೋಶಿ ಇದನ್ನು ಕಟುವಾಗಿ ಟೀಕಿಸಿದ್ದರು.
ಕಾರ್ಯಕ್ರಮದ ಆಯೋಜಕರಾದ ‘ಇಂಡಿಯನ್ ಬ್ಯುಸಿನೆಸ್ ಅಸೋಸಿಯೇಷನ್’ ಈ ಬಗ್ಗೆ ಕ್ಷಮೆಯಾಚಿಸಿದೆ.
ಭಾರತದಲ್ಲಿ ಬುಲ್ಡೋಜರ್‌ಗಳು ದ್ವೇಷ ಪ್ರೇರಿತ ಅಪರಾಧಗಳ ಸಂಕೇತವಾಗಿದೆ ಎಂದು ಮುಸ್ಲಿಂ ಗುಂಪುಗಳು ಆರೋಪಿಸಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲವು ಸಮುದಾಯಗಳನ್ನು ಗುರಿಯಾಗಿಸಿ ಈ ಯಂತ್ರಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆಯಾದರೂ, ಸರ್ಕಾರ ಅದನ್ನು ತಳ್ಳಿಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.