ADVERTISEMENT

ಅಮೆರಿಕ ವೀಸಾ: ಕಾಯುವ ಸಮಯ ಮತ್ತಷ್ಟು ತಗ್ಗಲಿದೆ

ಪ್ರತಿ ವರ್ಷ 12 ಲಕ್ಷ ಭಾರತೀಯರಿಗೆ ವೀಸಾ: ರಾಯಭಾರ ಕಚೇರಿ ಹಿರಿಯ ಅಧಿಕಾರಿಗಳು

ಪಿಟಿಐ
Published 10 ನವೆಂಬರ್ 2022, 14:02 IST
Last Updated 10 ನವೆಂಬರ್ 2022, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆರಿಕದ ವೀಸಾ ಪಡೆಯಲು ಕಾಯುವ ಅವಧಿಯು 2023ರ ಬೇಸಿಗೆಯ ವೇಳೆಗೆ ಗಣನೀಯ ಪ್ರಮಾಣದಲ್ಲಿ ಕಡಿತವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ ಸುಮಾರು 12 ಲಕ್ಷ ಭಾರತೀಯರಿಗೆ ವೀಸಾ ಸಿಗಬಹುದು ಎಂದುಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ವೀಸಾ ವಿಚಾರದಲ್ಲಿವಾಷಿಂಗ್ಟನ್‌ಗೆ ಭಾರತದ ಮೊದಲ ಆದ್ಯತೆ. ಭಾರತೀಯರಿಗೆ ಪ್ರತಿ ತಿಂಗಳು ಒಂದು ಲಕ್ಷ ವೀಸಾ ನೀಡುವ ಯೋಜನೆ ಇದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ವೀಸಾ ಪಡೆಯುವ ಪ್ರಕ್ರಿಯೆ‌ಗೆ ಕಾಯುವ ಪರಿಸ್ಥಿತಿಯನ್ನು ಕೋವಿಡ್ -19ರ ಪೂರ್ವದಲ್ಲಿದ್ದ ಮಟ್ಟಕ್ಕೆ ತರುವುದು ನಮ್ಮ ಉದ್ದೇಶ’ ಎಂದು ಅಧಿಕಾರಿ ಹೇಳಿದರು.

ಕಳೆದ ಒಂದು ವರ್ಷದಲ್ಲಿ ಸುಮಾರು 82 ಸಾವಿರ ವೀಸಾಗಳನ್ನು ನೀಡಲಾಗಿದೆ. ಮುಂದಿನ ಬೇಸಿಗೆ ಹೊತ್ತಿಗೆ 11 ಲಕ್ಷದಿಂದ 12 ಲಕ್ಷವೀಸಾಗಳನ್ನು ಭಾರತೀಯರಿಗೆ ನೀಡಲು ಎದುರು ನೋಡುತ್ತಿದ್ದೇವೆ. ವೀಸಾಕ್ಕೆ ಕಾಯಬೇಕಿರುವ ದೀರ್ಘ ಅವಧಿ ಸಮಸ್ಯೆಯನ್ನು ಭಾರತದ ಜೊತೆ ಸೇರಿ ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಅಮೆರಿಕದ ವೀಸಾಗಳನ್ನು ಪ್ರಸ್ತುತ ಹೆಚ್ಚು ಪಡೆಯುತ್ತಿರುವ ರಾಷ್ಟ್ರಗಳಲ್ಲಿ ಮೆಕ್ಸಿಕೊ ಮತ್ತು ಚೀನಾ ನಂತರದ ಸ್ಥಾನದಲ್ಲಿ ಭಾರತವಿದೆ. ಮುಂದಿನ ದಿನಗಳಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಆದ್ಯತೆಯ ಮೇಲೆಎಚ್ (ಎಚ್‌1ಬಿ) ಮತ್ತು ಎಲ್‌ ವರ್ಗದ ವೀಸಾ ನೀಡಲು ಈಗಾಗಲೇಭಾರತೀಯರನ್ನು ಗುರುತಿಸಲಾಗಿದೆ. ವೀಸಾ ನವೀಕರಣ ಬಯಸಿದ್ದವರಿಗೆ ಸುಮಾರು ಒಂದು ಲಕ್ಷಸ್ಲಾಟ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.ಕೆಲವು ವರ್ಗಗಳ ವೀಸಾಕ್ಕೆ ಕಾಯುವ ಸಮಯವನ್ನು ಈಗಾಗಲೇ ಹಿಂದಿನ 450 ದಿನಗಳ ಅವಧಿಯನ್ನು ಒಂಬತ್ತು ತಿಂಗಳಿಗೆ ತಗ್ಗಿಸಲಾಗಿದೆ. ಬಿ1, ಬಿ2 (ವ್ಯವಹಾರ ಮತ್ತು ಪ್ರವಾಸ) ವೀಸಾಗಳಿಗೆ ಕಾಯಬೇಕಿದ್ದ ಸುಮಾರು ಒಂಬತ್ತು ತಿಂಗಳ ಅವಧಿಯನ್ನೂ ತಗ್ಗಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ವೀಸಾಗಳಿಗೆ ಕಾಯುವ ಸಮಯ ಕಡಿತಗೊಳಿಸಲು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ವೀಸಾ ನವೀಕರಣಕ್ಕೆ ಕಾದಿರುವವರಿಗೆ ಕಾಯುವ ಅವಧಿ ಕಡಿತಗೊಳಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಕೋವಿಡ್‌ 19 ಸಂಬಂಧಿತ ಪ್ರಯಾಣ ನಿರ್ಬಂಧಗಳನ್ನು ತೆಗೆದ ನಂತರ ಅಮೆರಿಕದ ವೀಸಾ ಅರ್ಜಿಗಳು ಏರಿಕೆಯಾದ ಕೆಲವೇ ಪ್ರಮುಖ ದೇಶಗಳಲ್ಲಿ ಭಾರತವೂ ಒಂದು. ವೀಸಾಗಳ ಅನುಮತಿಗೆ ಕಾಯಬೇಕಾದ ದೀರ್ಘ ಸಮಯವನ್ನು ಪರಿಗಣಿಸಿ, ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಮತ್ತು ‘ಡ್ರಾಪ್‌ ಬಾಕ್ಸ್‌’ (ಸಂದರ್ಶನವಿಲ್ಲದೆ ಅಮೆರಿಕ ವೀಸಾ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ– 4 ವರ್ಷಗಳಿಂದ ಅಮೆರಿಕ ವೀಸಾ ಹೊಂದಿರುವವರು ಡ್ರಾಪ್ ಬಾಕ್ಸ್ ಸೌಲಭ್ಯಕ್ಕೆ ಅರ್ಹರು) ಸೌಲಭ್ಯಗಳನ್ನು ಹೆಚ್ಚಿಸುವುದು ಸೇರಿ ಹಲವು ಉಪಕ್ರಮಗಳನ್ನು ರೂಪಿಸುತ್ತಿದೆ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.