ADVERTISEMENT

ಅಮೆರಿಕದ ಭಾವಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಂಧ್ರದ ಅಳಿಯ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 14:39 IST
Last Updated 6 ನವೆಂಬರ್ 2024, 14:39 IST
<div class="paragraphs"><p>ಉಷಾ ವ್ಯಾನ್ಸ್ ಮತ್ತು ಜೆ.ಡಿ. ವ್ಯಾನ್ಸ್ </p></div>

ಉಷಾ ವ್ಯಾನ್ಸ್ ಮತ್ತು ಜೆ.ಡಿ. ವ್ಯಾನ್ಸ್

   

ಹೈದರಾಬಾದ್: ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಅವರು ಆಂಧ್ರಪ್ರದೇಶದ ಅಳಿಯ. ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ತೆಲುಗು ವಲಸಿಗರ ಮಗಳು.

ತಮ್ಮ ಜೀವನ ಪಯಣದಲ್ಲಿ ಉಷಾ ಅವರು ನೀಡಿರುವ ಬೆಂಬಲವನ್ನು ವ್ಯಾನ್ಸ್ ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಉಷಾ ಅವರ ಭಾರತ ಮೂಲ ಹಾಗೂ ಭಾರತೀಯ ಮೌಲ್ಯಗಳನ್ನು ಅವರು ಅಳವಡಿಸಿಕೊಂಡಿರುವ ಬಗ್ಗೆ ವ್ಯಾನ್ಸ್ ಅವರು ಬಹಳ ಮೆಚ್ಚುಗೆಯ ಧಾಟಿಯಲ್ಲಿ ಮಾತನಾಡಿದ್ದಿದೆ.

ADVERTISEMENT

ಚಿಲುಕುರಿ ಕುಟುಂಬದ ಮೂಲ ಇರುವುದು ಪಶ್ಚಿಮ ಗೋದಾವರಿ ಜಿಲ್ಲೆಯ ಸಣ್ಣ ಗ್ರಾಮ ವಡ್ಲೂರಿನಲ್ಲಿ. ಈ ಗ್ರಾಮ ಹೇಳಿಕೊಳ್ಳುವಂತಹ ವೈಶಿಷ್ಟ್ಯವನ್ನೇನೂ ಹೊಂದಿಲ್ಲ. 

ಉಷಾ ಅವರ ಸಂಬಂಧಿ, 96 ವರ್ಷ ವಯಸ್ಸಿನ ಪ್ರೊ. ಚಿಲುಕುರಿ ಶಾಂತಮ್ಮ ಅವರು ಆಂಧ್ರಪ್ರದೇಶದ ವಿಜಯನಗರಂನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಭೌತವಿಜ್ಞಾನ ಬೋಧಿಸುತ್ತಿದ್ದರು. ಅವರು ವಿಶಾಖಪಟ್ಟಣದಲ್ಲಿ ಇರುತ್ತಾರೆ. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು, ವ್ಯಾನ್ಸ್‌ ಅವರನ್ನು ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ನಂತರದಲ್ಲಿ, ವ್ಯಾನ್ಸ್ ಮತ್ತು ಉಷಾ ಅವರ ವಿವಾಹದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಉಷಾ ಅವರ ಅಪ್ಪ ಚಿಲುಕುರಿ ರಾಧಾಕೃಷ್ಣ ಮತ್ತು ಅಮ್ಮ ಲಕ್ಷ್ಮಿ ಅವರು 1980ರಲ್ಲಿ ಅಮೆರಿಕಕ್ಕೆ ವಲಸೆ ಹೋದರು. ಸ್ಯಾನ್‌ ಡಿಯಾಗೊ ನಗರದ ಹೊರವಲಯದಲ್ಲಿ ಬೆಳೆದ ಉಷಾ ಅವರು ಮೌಂಟ್‌ ಕಾರ್ಮೆಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ಕಾನೂನು ಪದವಿ ಪಡೆದು, ವಕೀಲೆ ಆದರು. ಉಷಾ ಅವರ ತಾಯಿ ಜೀವವಿಜ್ಞಾನಿ, ತಂದೆ ಎಂಜಿನಿಯರ್.

‘ಚಿಲುಕುರಿ ಹುಡುಗಿ ಉಷಾ, ಅಮೆರಿಕದಲ್ಲಿ ಬಹಳ ಮುಖ್ಯವಾದ ವ್ಯಕ್ತಿಯಾಗಿದ್ದಾರೆ ಎಂಬುದನ್ನು ತಿಳಿದು ಸಂತೋಷವಾಯಿತು. ನಾನು ಆಕೆಯನ್ನು ಯಾವತ್ತೂ ಭೇಟಿ ಮಾಡಿಲ್ಲ. ಆದರೆ ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಪ್ರೊ. ಶಾಂತಮ್ಮ ಅವರು ‘ಪ್ರಜಾವಾಣಿ’ಗೆ ಜುಲೈನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಶಾಂತಮ್ಮನವರ ಪತಿ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಸಹೋದರ ರಾಮ ಶಾಸ್ತ್ರಿ ಅವರ ಮೊಮ್ಮಗಳು ಉಷಾ.

ವಡ್ಲೂರಿನಲ್ಲಿ ಈಗ ಚಿಲುಕುರಿ ಕುಟುಂಬದ ಯಾರೂ ಇಲ್ಲ. ಕುಟುಂಬಕ್ಕೆ ಸೇರಿದ ಮನೆಯಲ್ಲಿ ಸಣ್ಣ ದೇವಸ್ಥಾನವೊಂದಿದೆ. ಉಷಾ ಅವರು ಯಾವತ್ತೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ.

ಡೊನಾಲ್ಡ್ ಟ್ರಂಪ್ ಮತ್ತು ವ್ಯಾನ್ಸ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಆಂಧ್ರಪ್ರದೇಶದ ಐ.ಟಿ. ಸಚಿವ ನಾರಾ ಲೋಕೇಶ್ ಅವರು, ಇದು ಆಂಧ್ರಪ್ರದೇಶದ ಜನರಿಗೆ ಬಹಳ ವಿಶಿಷ್ಟವಾದ ಸಂದರ್ಭ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.