ಬೆಂಗಳೂರು: ವೈವಾಹಿಕ ಪ್ರಕರಣವೊಂದರಲ್ಲಿ, ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.
ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸುದ್ದಿಯನ್ನು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.
‘ದೂರವಾಣಿಯಲ್ಲಿ ನಡೆದ ಖಾಸಗಿ ಮಾತುಕತೆಯು ಖಾಸಗಿತನ ಹಕ್ಕಿನಡಿ ಬರುತ್ತದೆ’ ಎಂದು ನ್ಯಾಯಮೂರ್ತಿ ಬಿಪಿನ್ ಚಂದರ್ ನೇಗಿ ತೀರ್ಪು ನೀಡುವಾಗ ಹೇಳಿದ್ದಾರೆ.
‘ವ್ಯಕ್ತಿಯೊಬ್ಬನ ಖಾಸಗಿ ಜೀವನದಲ್ಲಿ ದೂರವಾಣಿ ಸಂಭಾಷಣೆ ಪ್ರಮುಖ ವಿಷಯ. ಒಬ್ಬರ ಮನೆ/ಕಚೇರಿಯ ಖಾಸಗಿ ದೂರವಾಣಿ ಸಂಭಾಷಣೆ ಖಂಡಿತವಾಗಿಯೂ ಖಾಸಗಿತನದ ಹಕ್ಕು ಎಂದು ಹೇಳಿಕೊಳ್ಳಬಹುದು’ ಎಂದು ಅಕ್ಟೋಬರ್ 17 ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.
ವೈವಾಹಿಕ ಪ್ರಕರಣದ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು, ತನ್ನ ತಾಯಿ ಹಾಗೂ ಪತ್ನಿಯ ನಡುವಿನ ಫೋನ್ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದರು.
‘ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಅನುಮತಿ ಇಲ್ಲದಿದ್ದರೆ, ಫೋನ್ ಟ್ಯಾಪಿಂಗ್ ಅಥವಾ ಈ ರೀತಿ ಕಾನೂನು ಬಾಹಿರವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಸಂವಿಧಾನದ 21ನೇ ವಿಧಿಯನ್ನು (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘಿಸಿದಂತೆ’ ಎಂದು ಕೋರ್ಟ್ ಹೇಳಿದೆ.
‘ಪುಟ್ಟಸ್ವಾಮಿ ಪ್ರಕರಣದಲ್ಲಿ, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಹೇಳಲಾಗಿದೆ. ಹೀಗಾಗಿ ಈ ನ್ಯಾಯಾಲಯವು ಪತಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುತ್ತದೆ’ ಎಂದು ಹೇಳಿದೆ.
ಈ ತೀರ್ಪಿನಲ್ಲಿ 1997ರಲ್ಲಿ ಪಿಯುಸಿಎಲ್ vs ಭಾರತ ಸರ್ಕಾರ (ಫೋನ್ ಟ್ಯಾಪಿಂಗ್ ಪ್ರಕರಣಗಳಲ್ಲಿ ಆಗಾಗ್ಗೆ ಉಲ್ಲೇಖಿಸಲಾಗುವ ಪ್ರಕರಣ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.